ಸಾರಾಂಶ
ಮಂಗಳೂರು : ತಾನು ಮಹಿಳಾ ಪರ ಹೋರಾಟಗಾರ್ತಿಯಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಇಲ್ಲಿಯೂ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುತ್ತೇನೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ನೇತೃತ್ವದಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಮಹಿಳಾ ಸದಸತ್ವ ಅಭಿಯಾನ ಮತ್ತು ಮಹಿಳಾ ಸಮ್ಮಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಿವೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ಯಾವ ಸಂಶಯವೂ ಬೇಡ ಎಂದರು.
ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಪ್ರಥಮ ಸಭೆಗೆ ಮಂಗಳೂರಿಗೆ ಆಗಮಿಸಿದ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಪಕ್ಷವನ್ನು ಮುನ್ನಡಸುವಲ್ಲಿ ಪುರುಷರಷ್ಟೇ ಮಹಿಳೆಯರು ಸರಿಸಮಾನರಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗೇರು ಆಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪದ್ಮರಾಜ್ ಆರ್., ರಕ್ಷಿತ್ ಶಿವರಾಮ್, ಜಿ.ಎ. ಭಾವ, ಲಾವಣ್ಯ ಬಲ್ಲಾಳ್, ಕೃಪಾ ಆಳ್ವ, ಸುರೇಂದ್ರ ಕಂಬಳಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ನಾಯಕಿಯರು ಇದ್ದರು.
ಮಂಗಳೂರು ದಕ್ಷಿಣ ಬ್ಲಾಕ್‌ನ ಶೈಲಜಾ ನೀತಾ ಡಿಸೋಜ ಮತ್ತು ಗೀತಾ ಅತ್ತಾವರ್, ಬೆಳ್ತಂಗಡಿ ಬ್ಲಾಕ್‌ನ ಮಧುರಾ ರಾಘವ್, ಮಂಗಳೂರು ನಗರ ಬ್ಲಾಕ್‌ನ ಸ್ವರೂಪ ಶೆಟ್ಟಿ, ಉಳ್ಳಾಲ ಬ್ಲಾಕ್‌ನ ಸುರೇಖಾ ಚಂದ್ರಹಾಸ್, ಆರಿಫಾ ಮುಂತಾದವರನ್ನು ಗೌರವಿಸಲಾಯಿತು.