ಚಳ್ಳಕೆರೆ ನೆಹರೂ ವೃತ್ತದಿಂದ ಪಾವಗಡ ರಸ್ತೆಯ ಕಡೆಗೆ ಹೋಗುವಾಗ ಸಿಗುವ ರೈಲ್ವೆ ಗೇಟ್ ಹತ್ತಿರ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಡುವ ಪಾಡು ಅಷ್ಟಿಷ್ಟಲ್ಲ. ಮುಂಜಾನೆ ಕಾಲೇಜಿಗೆ ಹೋಗುವ ಸಮಯಕ್ಕೆ ರೈಲು ಬರುವ ಮುನ್ನ ಹಾಕುವ ಗೇಟ್ ಮತ್ತೆ ಓಪನ್ ಆಗಲು ಇಪ್ಪತ್ತು ನಿಮಿಷ ಕಾಯಬೇಕಾದ ದುಸ್ಥಿತಿ ಇಲ್ಲಿನದು.

ಜಡೆಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ನೆಹರೂ ವೃತ್ತದಿಂದ ಪಾವಗಡ ರಸ್ತೆಯ ಕಡೆಗೆ ಹೋಗುವಾಗ ಸಿಗುವ ರೈಲ್ವೆ ಗೇಟ್ ಹತ್ತಿರ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಡುವ ಪಾಡು ಅಷ್ಟಿಷ್ಟಲ್ಲ. ಮುಂಜಾನೆ ಕಾಲೇಜಿಗೆ ಹೋಗುವ ಸಮಯಕ್ಕೆ ರೈಲು ಬರುವ ಮುನ್ನ ಹಾಕುವ ಗೇಟ್ ಮತ್ತೆ ಓಪನ್ ಆಗಲು ಇಪ್ಪತ್ತು ನಿಮಿಷ ಕಾಯಬೇಕಾದ ದುಸ್ಥಿತಿ ಇಲ್ಲಿನದು. ಗೇಟ್ ಹಾಕಿದಾಗ ಅದರಲ್ಲೂ ಶಾಲೆಗೆ ಹೋಗುವವರು ಬರುವವರು ಕಾಯುವ ಪರಿ ನೋಡಿದರೆ ಎಂಥವರ ಮನಸ್ಸು ಕರಗದೇ ಇರಲಾರದು.

ಪಾವಗಡ ರಸ್ತೆಯ ಡಿ.ಉಪ್ಪಾರಹಟ್ಟಿ ಆಸುಪಾಸು, ರೈಲ್ವೆ ಗೇಟ್ ದಾಟಿ ಮುಂದಕ್ಕೆ ಸಾಗಿದರೆ ಸಿಗುವ ಸಾಯಿ ಟೆಂಪಲ್ ಗೆ ಹೋಗಿ ಬರುವ ಭಕ್ತರ ಸಂಖ್ಯೆಯೂ ದೊಡ್ಡದಿದೆ. ಜೊತೆಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ ವಿದ್ಯಾಲಯ, ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ಅನೇಕ ಸಂಸ್ಥೆಗಳು ಈ ರಸ್ತೆಯಲ್ಲಿ ಇರುವುದರಿಂದ ಸಹಜವಾಗಿಯೇ ಮುಂಜಾನೆ ಶಾಲಾ ಸಮಯ, ಸಂಜೆ ಶಾಲೆ ಬಿಡುವ ಸಮಯ ಸೇರಿದಂತೆ ರೈತಾಪಿ ವರ್ಗದ ಜನರು ಸಮೀಪದ ಬೊಮ್ಮ ಸಮುದ್ರ, ಭರಮಸಾಗರ, ದೊಡ್ಡೇರಿ, ಉಪ್ಪಾರಹಟ್ಟಿ ಗ್ರಾಮದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಬಳ್ಳಾರಿ ಗುಂತಕಲ್ಲು ಸೇರಿದಂತೆ ಮೈಸೂರಿನವರೆಗೂ ನಾನಾ ಸಂಪರ್ಕ ಸಾಧಿಸುವ ಇಲ್ಲಿನ ರೈಲ್ವೆ ಮಾರ್ಗ ಚಳ್ಳಕೆರೆ ನಗರದಲ್ಲಿ ಹಾದು ಹೋಗಿರುವ ಪರಿಣಾಮವಾಗಿ ದಿನಂಪ್ರತಿ ಇಲ್ಲಿ ರೈಲ್ವೆ ಗೇಟ್ ಹಾಕುವ ಸಮಯ ಇಲ್ಲಿನ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ವಾಸ್ತವ.ಇದೇ ಮಾದರಿಯಲ್ಲಿ ಬೆಂಗಳೂರು ರಸ್ತೆಯ ರೋಜಾ ಡಾಬಾ ಮುಂಭಾಗದಲ್ಲಿ ರೈಲ್ವೇ ಮೇಲ್ಸೇತುವೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರು ರಸ್ತೆಯಲ್ಲಿ ರೈಲ್ವೇ ಗೇಟ್ ಸಮಸ್ಯೆ ಇಲ್ಲ.

ಪಾವಗಡ ರಸ್ತೆಯಲ್ಲಿರುವ ರೈಲ್ವೆ ಸ್ಟೇಶನ್ ಮುಂಭಾಗದ ಆನತಿ ದೂರದಲ್ಲೇ ಬಳ್ಳಾರಿಯಿಂದ ಬರುವ ಕಬ್ಬಿಣದ ಅದಿರನ್ನು ಒಂದೆಡೆ ಶೇಖರಿಸಲು ಡಂಪಿಂಗ್ ಯಾರ್ಡ್ ಮಾಡಿರುವುದರಿಂದ ರೈಲ್ವೆ ಗೂಡ್ಸ್ ಗಳಿಂದ ಬರುವ ಕಬ್ಬಿಣದ ಅದಿರನ್ನು ಹೆಗ್ಗೆರೆಯ ಪ್ಯಾಕ್ಟರಿಗೆ ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ಹಲವು ಲೋಪಗಳೂ ಉಂಟು ಹಾಗೂ ಬೆಂಗಳೂರು ರಸ್ತೆಯ ಗಂಧರ್ವ ಲಾಡ್ಜ್ ಮುಂದೆ ಸಾಗಿ ರೋಜಾ ಡಾಬಾದವರೆಗೂ ರಸ್ತೆ ಕೆಂಪುಮಯವಾಗಿದೆ. ರೈಲ್ವೆ ಹಳಿ ಹಾದುಹೋಗಿರುವ ಪಾವಗಡ ರಸ್ತೆಯಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿರುವುದನ್ನು ತಪ್ಪಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ರೈಲ್ವೆ ಮೇಲ್ಸುತುವೆಗೆ ಈಗಾಗಲೇ ಸಿಂಗಲ್ ಲೈನ್ ಗೆ ಅವಕಾಶವಿದೆ. ಮುಂದೆ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗುವ ಅವಕಾಶ ಇರುವುದರಿಂದ ಮುಂದಾಲೋಚನಾ ಕ್ರಮವಾಗಿ ಡಬಲ್ ರಸ್ತೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಪತ್ರದಲ್ಲಿ ಮನವಿ ಮಾಡಿ ಮೈಸೂರು ರೈಲ್ವೆ ವಿಭಾಗೀಯ ಕೇಂದ್ರಕ್ಕೆ ಪತ್ರ ಕಳುಹಿಸಲಾಗಿದೆ. ನಗರಸಭೆಯೂ ಪ್ಲಾನ್ ಮಾಡಿ ಕಳುಹಿಸಿದೆ.

ಟಿ. ರಘುಮೂರ್ತಿ ಶಾಸಕ.

ರೈಲ್ವೆ ಇಲಾಖೆ ಉನ್ನತಾಧಿಕಾರಿಗಳ ಭೇಟಿ

ರೈಲ್ವೆ ಇಲಾಖೆ ಉನ್ನತಾಧಿಕಾರಿಗಳು ಈ ಗೇಟ್ ಗೆ ಮೇಲ್ಸೇತುವೆ ನಿರ್ಮಾಣ ಮಾಡುವ ಸಂಬಂಧ ವೀಕ್ಷಿಸಿ ಒಂದೆರೆಡು ಬಾರಿ ಸಮಾಲೋಚನಾ ಸಭೆಯನ್ನೂ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ರೈಲ್ವೆ ಹಳಿಯ ಅಕ್ಕಪಕ್ಕದ ನೂರು ಅಡಿಗಳಷ್ಟು ಜಾಗ ರೈಲ್ವೆ ಇಲಾಖೆಗೆ ಸೇರಿದ್ದಾಗಿರುತ್ತದೆ. ಆದ್ದರಿಂದ, ಅವರೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಎಇಇ ಹಕೀಂ ಹೇಳಿದ್ದಾರೆ.

ರೈಲ್ವೆ ಮೇಲ್ಸೇತುವೆಗೆ ಹೋರಾಟ

ಪಾವಗಡ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಆಗಬೇಕು ಎಂದು ಕಳೆದ ಹದಿನೈದು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಲೋಕಸಭಾ ಸದಸ್ಯರು ರೈಲ್ವೆ ಮಂತ್ರಿಗಳಿಗೆ ಮನವಿ ಕೊಟ್ಟಿರುವ ದಾಖಲೆಗಳಿವೆ. ಆದರೆ, ಎಲ್ಲರೂ ಆಯಾ ಕಾಲದಲ್ಲಿ ಭರವಸೆ ನೀಡುತ್ತಲೇ ಬಂದಿದ್ದಾರೆ. ಈಗಿನ ಕೇಂದ್ರ ರೈಲ್ವೆ ಖಾತೆ ಸಚಿವ ಸೋಮಣ್ಣನವರು ಭರವಸೆ ನೀಡಿದ್ದಾರೆ. ಗೋವಿಂದ ಕಾರಜೋಳ ಅವರೂ ಭರವಸೆ ನೀಡಿದ್ದಾರೆ. ಸ್ಥಳೀಯ ಶಾಸಕರೂ ಕೂಡ ಪತ್ರ ಬರೆದು ಒತ್ತಾಯಿಸಿದ್ದಾರೆ. ನನ್ನ ಜೀವಮಾನದಲ್ಲಿ ಮೇಲ್ಸೇತುವೆ ನೋಡುತ್ತೇನೋ ಇಲ್ಲವೋ..? ಗೊತ್ತಿಲ್ಲ ಎನ್ನುತ್ತಾರೆ ರೈತ ಮುಖಂಡ ಕೆ.ಪಿ.ಭೂತಯ್ಯ.