ಗ್ರಾಹಕರ ರಕ್ಷಣೆ ಎಲ್ಲರ ಹೊಣೆ: ಎನ್.ಆರ್. ಚನ್ನಕೇಶವ

| Published : Jan 30 2025, 12:30 AM IST

ಗ್ರಾಹಕರ ರಕ್ಷಣೆ ಎಲ್ಲರ ಹೊಣೆ: ಎನ್.ಆರ್. ಚನ್ನಕೇಶವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್. ಚನ್ನಕೇಶವ ಹೇಳಿದರು.

ಚಿಕ್ಕಮಗಳೂರಿನ ಬಸವನಹಳ್ಳಿ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್. ಚನ್ನಕೇಶವ ಹೇಳಿದರು.ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ನಗರದ ಬಸವನಹಳ್ಳಿಯ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿ (ಪ್ರೌಢಶಾಲಾ ವಿಭಾಗ) ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಗ್ರಾಹಕರು ಅಂದರೆ ನಾವೆಲ್ಲರು ಇಂದು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಖರೀದಿದಾರನ ಯೋಗ ಕ್ಷೇಮದ ದೃಷ್ಟಿಯಲ್ಲಿ ಗ್ರಾಹಕ ಹಕ್ಕುಗಳ ಅವಶ್ಯಕತೆ ಇದೆ. ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯದೇ ಹೋದರೆ ನಮಗೆ ಒಳಿತಿಲ್ಲ, ಸಮಾಜದ ಧ್ವನಿಯಾದಾಗ ಮಾತ್ರ ಗ್ರಾಹಕರ ರಕ್ಷಣೆ ಸಾಧ್ಯ. ತಾವು ಖರೀದಿಸಲಾದ ವಸ್ತು ಹಾಗೂ ಅದರ ಸೇವೆ ಗುಣಮಟ್ಟದ್ದಾಗಿದೆಯೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಖರೀದಿಸಲಾದ ವಸ್ತುವಿನ ಬಿಲ್‌ನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮೋಸ ಮಾಡುವವರು ತುಂಬಾ ಚಾಣಾಕ್ಷ ನಡೆ ಅನುಸರಿಸುತ್ತಾರೆ. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರು ಸುಶಿಕ್ಷಿತರಾಗಿರಬೇಕು ಅದರಲ್ಲೂ ತಂತ್ರಜ್ಞಾನ ತಿಳಿಯಬೇಕು. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ಎಚ್ಚರ ವಹಿಸುವುದು ಅತ್ಯವಶ್ಯಕ. ಗ್ರಾಹಕರ ಹಕ್ಕುಗಳ ಅರಿವಿನಿಂದ ವಸ್ತುಗಳ ಕಲಬೆರಕೆ ಬಗ್ಗೆ ಎಚ್ಚರ ವಹಿಸಲು ಸಾಧ್ಯ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಮಾತನಾಡಿ, ಸಮಾಜದಲ್ಲಿ ಒಬ್ಬರನ್ನೊಬ್ಬರು ಅವಲಂಬಿಸಿರುವುದರಿಂದ ನಿತ್ಯ ಜೀವನಕ್ಕೆ ಅಗತ್ಯ ವಸ್ತು ಖರೀದಿಸುವಾಗ ನಡೆಯುವ ಮೋಸ, ವಂಚನೆಗೆ ಒಳಗಾಗುವುದನ್ನು ತಡೆಯ ಬುಹುದು ಎಂದು ತಿಳಿಸಿದರು.

ಗ್ರಾಹಕರು ಎಷ್ಟೇ ಜಾಗೃತರಾಗಿದ್ದರೂ ಒಂದೊಮ್ಮೆ ಮೋಸ ಹೋಗುವುದು ಸಹಜ, ಇಂತಹ ಸಂದರ್ಭದಲ್ಲಿ ಮೋಸ ಹೋದ ಯಾವುದೇ ಗ್ರಾಹಕನು ತನಗಾದ ನಷ್ಟವನ್ನು ಹಿಂಪಡೆಯಲು ಗ್ರಾಹಕ ವೇದಿಕೆಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಬಹುದು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಇ. ಪ್ರೇಮ ಮಾತನಾಡಿ, ಗ್ರಾಹಕರಿಗೆ ಅನಗತ್ಯವಾಗಿ ವಂಚಿಸುವ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯವಹಾರ ಹಾಗೂ ಆನ್ ಲೈನ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಎಷ್ಟು ಅನುಕೂಲವೋ ಅಷ್ಟೇ ವಂಚನೆ ಹೆಚ್ಚು. ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ವ್ಯವಹಾರ ಮಾಡುವ ಜೊತೆಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಉಪ ಪ್ರಾಚಾರ್ಯೆ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಸ್‌.ಆರ್‌. ರಶ್ಮಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟರ್ ಇಂದುಮತಿ ಬಾಯಿ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಾಜೀವ್ ಉಪಸ್ಥಿತರಿದ್ದರು. 28 ಕೆಸಿಕೆಎಂ 3ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿ (ಪ್ರೌಢಶಾಲಾ ವಿಭಾಗ) ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಯನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್. ಚನ್ನಕೇಶವ ಉದ್ಘಾಟಿಸಿದರು.