ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ವಿನಾಕಾರಣ ಹೋರಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯವರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ಹೇಳಿಕೆ ನೀಡಿದ್ದರು. ತಮ್ಮ ಭಾಷಣದ ಸರದಿ ಬಂದಾಗ ಮುನಿರತ್ನ ಅವರು ಮುನಿಯಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಲು ಮುಂದಾದರು.
ಸಭಾಂಗಣದಲ್ಲಿದ್ದ ಹಲವರು ಈ ಸಮಾರಂಭದಲ್ಲಿ ರಾಜಕೀಯದ ಮಾತು ಬೇಡ ಎಂದು ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿ, ಭಾಷಣಕ್ಕೆ ಅಡ್ಡಿಪಡಿಸಿದರು. ಕೆಲವರು ಪಕ್ಷ ವಿರೋಧಿ ಮುನಿರತ್ನ ಎಂದು ಕೆಲವರು ಘೋಷಣೆ ಕೂಗಿದರು.ಆದರೆ, ಇದರಿಂದ ವಿಚಲಿತರಾಗದ ಮುನಿರತ್ನ, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಕ್ಕೆ ಏನೂ ಮಾಡುತ್ತಿಲ್ಲ. ಮುನಿಯಪ್ಪ ಅವರು, ಜೆಡಿಎಸ್, ಬಿಜೆಪಿ ಒಂದಾಗಿ ಸಮಸ್ಯೆ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ನಾವು ತೊಂದರೆ ಮಾಡುತ್ತಿಲ್ಲ. ಸಿಎಂ ಬಗ್ಗೆ ನಾವು ಯಾವತ್ತೂ ಮಾತಾಡಿಲ್ಲ. ನಿಮ್ಮ ಪಕ್ಷದಲ್ಲೇ ಏನೇನೋ ನಡೆಯುತ್ತಿದೆ. ನಾನು ಸಿದ್ದರಾಮಯ್ಯ ವಿರುದ್ಧ ಮಾತನಾಡೋದಿಲ್ಲ. ಈ ಹಿಂದೆ ಐದು ವರ್ಷ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕಾರಣಾಂತರಿಂದ ಪಕ್ಷ ಬಿಟ್ಟಿದ್ದೇನೆ. ಈಗ ವಿರೋಧ ಪಕ್ಷದ ಶಾಸಕನಾಗಿ ಮನವಿ ಮಾಡುವುದೇನೆಂದರೆ ಬೆಂಗಳೂರು ನಗರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದರು.