ಕರಾವಳಿಯಲ್ಲಿ ಮುಂದುವರಿದ ಮಳೆಯಬ್ಬರ

| Published : Jul 06 2024, 12:49 AM IST

ಸಾರಾಂಶ

ನಗರದ ಹೈಚರ್ಚ್‌, ಬೈತಖೋಲಗಳಲ್ಲಿ ರಸ್ತೆಗಳಲ್ಲಿ ಒಂದೂವರೆ ಅಡಿಯಷ್ಟು ನೀರು ಪ್ರವಹಿಸುತ್ತಿತ್ತು. ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಜನಜೀವನ ಅಸ್ತವ್ಯಸ್ತವಾಗಿತ್ತು.

ಕಾರವಾರ: ಜಿಲ್ಲೆಯ ಇತರೆಡೆ ಇಳಿಮುಖವಾದ ಮಳೆ ಶುಕ್ರವಾರ ಕಾರವಾರದಲ್ಲಿ ಅಬ್ಬರಿಸುತ್ತಿದೆ. ಕೆಲವು ಮನೆಗಳು ಜಲಾವೃತವಾದರೆ, ನಗರದ ರಸ್ತೆಗಳ ಮೇಲೂ ನೀರು ನುಗ್ಗಿತ್ತು. ಕದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರಿಂದ ಜಲಾಶಯದಿಂದ 4 ಗೇಟ್ ಗಳ ಮೂಲಕ 6 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಯಿತು. ಸಂಜೆಯ ವೇಳೆಗೆ ಕರಾವಳಿ ಪ್ರದೇಶದಲ್ಲೂ ಮಳೆ ಚುರುಕುಗೊಂಡಿತು.

ಕಾರವಾರದಲ್ಲಿ ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಭಾರಿ ಮಳೆ ಮಧ್ಯಾಹ್ನದ ತನಕ ಮುಂದುವರಿಯಿತು. ಕಾರವಾರದ ಅರಗಾ, ಚೆಂಡಿಯಾಗಳಲ್ಲಿ ಗುಡ್ಡಬೆಟ್ಟಗಳಿಂದ ಬಂದ ಭಾರೀ ಪ್ರಮಾಣದ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗದೆ ಇರುವುದರಿಂದ ಆ ಪ್ರದೇಶದ ಮನೆಗಳು ಜಲಾವೃತವಾದವು. ಬೈತಖೋಲದಲ್ಲೂ ಕೆಲವು ಮನೆಗಳು ಜಲಾವೃತವಾಗಿವೆ. ಕದ್ರಾ ಜಲಾಶಯದಿಂದ ಕಡಿಮೆ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿರುವುದರಿಂದ ಕಾಳಿ ನದಿಯಲ್ಲಿ ಸದ್ಯಕ್ಕೆ ಪ್ರವಾಹದ ಪರಿಸ್ಥಿತಿ ಇಲ್ಲ.ನಗರದ ಹೈಚರ್ಚ್‌, ಬೈತಖೋಲಗಳಲ್ಲಿ ರಸ್ತೆಗಳಲ್ಲಿ ಒಂದೂವರೆ ಅಡಿಯಷ್ಟು ನೀರು ಪ್ರವಹಿಸುತ್ತಿತ್ತು. ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಜನಜೀವನ ಅಸ್ತವ್ಯಸ್ತವಾಗಿತ್ತು.

ಮನೆಗಳ ಸುತ್ತಮುತ್ತ ತುಂಬಿಕೊಂಡಿದ್ದ ನೀರು ಇಳಿದಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾಳಜಿ ಕೇಂದ್ರಕ್ಕೆ ಭೇಟಿ ಮಾಡಿ ನೆರೆ ಸಂತ್ರಸ್ತರ ಅಹವಾಲು ಆಲಿಸಿದ್ದಾರೆ.ಹವಾಮಾನ ಇಲಾಖೆಯ ಪ್ರಕಾರ ಇನ್ನೂ 3 ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಿನವಿಡಿ ಮೋಡ ಕವಿದ ವಾತಾವರಣ ಇತ್ತು.