ಕುರುಬ ಎಸ್ಟಿ ಆಗುವವರೆಗೂ ನಿರಂತರ ಹೋರಾಟ: ಕನಕಶ್ರೀ

| Published : Jan 06 2024, 02:00 AM IST

ಸಾರಾಂಶ

ಕಳೆದ 30 ವರ್ಷಗಳಿಂದ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಿರಂತರ ಹೋರಾಟ ನಡೆಸಿದ್ದರೂ ರಾಜಕಾರಣಿಗಳೇ ಕಾರಣೀಭೂತರಾಗಿದ್ದಾರೆ. ಇಂತವರ ವಿರುದ್ಧ ಸಮುದಾಯ ಎಚ್ಚರಿಕೆಯಿಂದಿರಬೇಕು

ಸುರಪುರ: ಕಳೆದ 30 ವರ್ಷಗಳಿಂದ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಿರಂತರ ಹೋರಾಟ ನಡೆಸಿದ್ದರೂ ರಾಜಕಾರಣಿಗಳೇ ಕಾರಣೀಭೂತರಾಗಿದ್ದಾರೆ. ಇಂತವರ ವಿರುದ್ಧ ಸಮುದಾಯ ಎಚ್ಚರಿಕೆಯಿಂದಿರಬೇಕು ಎಂದು ತಿಂಥಣಿಯ ಕನಕ ಗುರುಪೀಠದ ಪೀಠಾಧಿಪತಿ ಸಿದ್ದರಾಮಾನಂದಪುರಿ ಶ್ರೀಗಳು ನುಡಿದರು.

ನಗರದ ವೇಣುಗೋಪಾಲ ಸ್ವಾಮಿ ಆವರಣದಿಂದ ಕರ್ನಾಟಕ ಪ್ರದೇಶಗೊಂಡ (ಕುರುಬ) ಸಂಘದ ನೇತೃತ್ವದಲ್ಲಿ ಕುರುಬರಿಗೆ ಎಸ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತದಲ್ಲಿ ಸಮಾಪ್ತಿಗೊಂಡು ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ಪರಿಶಿಷ್ಟ ಪಂಗಡದವರ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವಾಗಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯ ಪಡೆಯುವ ನ್ಯಾಯಯುತ ಹೋರಾಟವಾಗಿದೆ ಎಂದರು.

ಬೀದರಿನಲ್ಲಿ ಮಾತ್ರ ಗೊಂಡ ಕುರುಬರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ನೀಡುತ್ತಿಲ್ಲ. ಆದ್ದರಿಂದ ಕುರುಬರು ಅಥವಾ ಗೊಂಡ ಕುರುಬರು ಬೇರೆಯಲ್ಲ. ಎರಡು ಒಂದೇ ಆಗಿದ್ದು, ಕೂಡಲೇ ಕುರುಬರನ್ನು ಗೊಂಡ ಕುರುಬರೆಂಬುದಾಗಿ ಪರಿಗಣಿಸಿ ಕೂಡಲೇ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು. ಅಲ್ಲಿಯವರೆಗೂ ಯಾದಗಿರಿ, ಕಲಬುರಗಿ ಜಿಲ್ಲೆಯಲ್ಲಿ ಹೋರಾಟ ನಡೆಯುತ್ತದೆ. ಅಲ್ಲದೆ ರಾಜಕಾರಣಿಗಳ ಮನೆಗೆ ನುಗ್ಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಸಮುದಾಯದ ವಿವಿಧ ಮುಖಂಡರು ಮಾತನಾಡಿ, ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವವರಿಗೆ ಹೋರಾಟ ನಿಲ್ಲುವುದಿಲ್ಲ. ಬದಲಿಗೆ ಹೋರಾಟ ಇನ್ನು ಹೆಚ್ಚಿನ ರೀತಿಯಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.

ಅಗತೀರ್ಥದ ಶಾಂತಮಯ್ಯ ಸ್ವಾಮಿ, ತಾಲೂಕು ಅಧ್ಯಕ್ಷ ಕಾಳಪ್ಪ ಎಂ.ಕವಾಯಿತಿ, ರಂಗನಗೌಡ ಪಾಟೀಲ ದೇವಿಕೇರಿ, ಮಲ್ಲಣ್ಣ ಐಕೂರು ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ, ಮಲ್ಲಯ್ಯ ಕಮತಗಿ, ಮಲ್ಲು ದಂಡಿನ್, ರವಿ ಸಾಹುಕಾರ ಆಲ್ದಾಳ, ನಿಂಗಣ್ಣ ಚಿಂಚೋಡಿ, ಕೃಷ್ಣಾ ಬಾದ್ಯಾಪುರ, ಬೀರಲಿಂಗ, ಪರಮಣ್ಣ ಹಾಲಭಾವಿ ಸೇರಿದಂತೆ ಇತರರಿದ್ದರು.

ತಹಸೀಲ್ದಾರ್‌ಗೆ ಧಿಕ್ಕಾರ: ಸಾವಿರಾರು ಸಂಖ್ಯೆಯಲ್ಲಿ ಕುರುಬ ಸಮುದಾಯದವರು ಸೇರಿ ಪ್ರತಿಭಟಿಸುವ ಮುನ್ಸೂಚನೆ ಇದ್ದರೂ ಸ್ಥಳಕ್ಕಾಗಮಿಸದ ಸುರಪುರ ತಹಸೀಲ್ದಾರ್ ಕೆ. ವಿಜಯಕುಮಾರ ವಿರುದ್ಧ ಧಿಕ್ಕಾರ ಮೊಳಗಿತು. ಇನ್ನೂ ಕೆಲವು ಮುಖಂಡರು ಧಿಕ್ಕಾರ ಕೂಗುತ್ತಾ ರಸ್ತೆಯಲ್ಲೇ ಕುಳಿತರು. ಜನರ ಕಾಳಜಿಯಿಲ್ಲದ ತಹಸೀಲ್ದಾರ್ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಲಾಯಿತು. ವಾಕ್ಸಮರ ಧಿಕ್ಕಾರ ಕೂಗುತ್ತಿದ್ದಂತೆ ಮಧ್ಯಪ್ರವೇಶಿಸಿ ಪೊಲೀಸರು ಶಾಂತಿಗೊಳಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮುಖಂಡರು ಮತ್ತು ಪೊಲೀಸರ ನಡುವೆ ವಾಕ್ಸಮರ ನಡೆಯಿತು. ಪ್ರತಿಭಟಿಸುತ್ತೇವೆ ಎಂಬುದಾಗಿ ಮನವಿ ನೀಡಿದ್ದರೂ ನಿಷ್ಕಾಳಜಿಯಿಂದ ಹೊರಗೆ ಹೋಗಿದ್ದಾರೆ. ಅವರು ಬರುವ ತನಕ ಪ್ರತಿಭಟನೆ ಮುಂದುವರಿಯತ್ತದೆ ಎಂದೇಳಿ ರಸ್ತೆಯಲ್ಲೇ ಕುಳಿತರು.