ನಿರಂತರ ಅಧ್ಯಯನವೇ ಯಶಸ್ಸಿಗೆ ದಾರಿ

| Published : Aug 11 2024, 01:32 AM IST

ಸಾರಾಂಶ

ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ೧೩ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಂಧ್ರಪ್ರದೇಶದ ಗುಂಟೂರಿನ ವಿಜ್ಞಾನ್ ಫೌಂಡೇಶನ್ ಆಫ್ ಸೈನ್ಸ್ ಟೆಕ್ನಾಲಜಿ ಅಂಡ್ ರಿಸರ್ಚ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ನಾಗಭೂಷಣ್‌, ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಯಾರೊಬ್ಬರ ಅವಲಂಬನೆಗೆ ಒಳಗಾಗಬಾರದು. ತಮ್ಮ ಸ್ವ ಸಾಮರ್ಥ್ಯದಿಂದ ಹಾಗೂ ನಿರಂತರ ಅಧ್ಯಯನದಿಂದ ತಮ್ಮ ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಯಾರೊಬ್ಬರ ಅವಲಂಬನೆಗೆ ಒಳಗಾಗಬಾರದು. ತಮ್ಮ ಸ್ವ ಸಾಮರ್ಥ್ಯದಿಂದ ಹಾಗೂ ನಿರಂತರ ಅಧ್ಯಯನದಿಂದ ತಮ್ಮ ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಆಂಧ್ರಪ್ರದೇಶದ ಗುಂಟೂರಿನ ವಿಜ್ಞಾನ್ ಫೌಂಡೇಶನ್ ಆಫ್ ಸೈನ್ಸ್ ಟೆಕ್ನಾಲಜಿ ಅಂಡ್ ರಿಸರ್ಚ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ನಾಗಭೂಷಣ್‌ ತಿಳಿಸಿದರು.

ಅವರು ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ೧೩ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮತನಾಡುತ್ತಾ, ವಿದ್ಯಾರ್ಥಿಗಳು ತಮ್ಮಲ್ಲಿರುವ ಬುದ್ಧಿವಂತಿಕೆಯಿಂದ ಅವಕಾಶಗಳನ್ನು ಸೃಷ್ಟಿಸಿಕೊಂಡು ವೈಯಕ್ತಿಕ ಬದುಕನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ರಚನಾ ರಾಜೀವ್, ಪದವೀಧರರು ವೃತ್ತಿ ಬದುಕಿನಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಿ ನಿಷ್ಠೆಯಿಂದ ಕೆಲಸ ಮಾಡಿ, ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಭಾರತೀಯ ಎಂಜಿನಿಯರಿಂಗ್ ಪದವೀಧರರಿಗೆ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಿದೆ ಎಂದರು.

ರಾಜೀವ್ ತಾಂತ್ರಿಕ ಮಹಾವಿದ್ಯಾಲಯವು ಪ್ರತೀ ವರ್ಷವೂ ಹೊಸತನ್ನು ತನ್ನದಾಗಿಸಿಕೊಂಡು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜೀವ್ ಸಂಸ್ಥೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರುವುದು ಹರ್ಷದಾಯಕ ವಿಚಾರ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್, ಕಾರ್ಯದರ್ಶಿ ಡಾ. ಬಿ.ಎನ್. ರತ್ನ, ತಾಂತ್ರಿಕ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪಿ.ಕೆ. ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಸುಮಾರು ೪೦೦ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.