ನಿರಂತರ ಮಳೆಗೆ ಶಿಗ್ಗಾಂವಿ ತಾಲೂಕಿನಲ್ಲಿ ಅಪಾರ ಬೆಳೆಹಾನಿ

| Published : Aug 29 2025, 01:00 AM IST

ನಿರಂತರ ಮಳೆಗೆ ಶಿಗ್ಗಾಂವಿ ತಾಲೂಕಿನಲ್ಲಿ ಅಪಾರ ಬೆಳೆಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ಒಟ್ಟು ಭೂ ವಿಸ್ತೀರ್ಣದಲ್ಲಿ ಶೇ. ೭೦ರಷ್ಟು ಒಣ ಬೇಸಾಯ ಪದ್ಧತಿ ಅಳವಡಿಸಿದ್ದಾರೆ. ಹೀಗಾಗಿ ಮಳೆ ಆಶ್ರಿತ ಬೆಳೆಯನ್ನೇ ಹೆಚ್ಚಿನ ರೈತರು ಅವಲಂಬಿತರಾಗಿದ್ದಾರೆ. ಬೆಳೆ ಬಾರದೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಿಗ್ಗಾಂವಿ: ಪ್ರಸಕ್ತ ವರ್ಷ ಸತತವಾಗಿ ಮಳೆ ಸುರಿದ ಪರಿಣಾಮವಾಗಿ ಮುಂಗಾರು ಬೆಳೆ ಸಂಪೂರ್ಣ ಜಲಾವೃತಗೊಂಡು, ಜವಳು ಹಿಡಿದು ಬೆಳೆಹಾನಿಯಾಗುತ್ತಿವೆ. ರೈತರು ಬೆಳೆಹಾನಿ, ಬೆಳೆ ವಿಮೆ ಪರಿಹಾರ ಪಡೆಯಲು ಪರದಾಡುವಂತಾಗಿದೆ. ತಾಲೂಕಿನ ರೈತ ಸಮೂಹದಲ್ಲಿ ಆತಂಕದ ಛಾಯೆ ಮೂಡಿದೆ.ಮೇ ಕೊನೆ ವಾರದಲ್ಲಿ ಮುಂಗಾರು ಮಳೆ ಆರಂಭವಾಗಿತ್ತು. ಋತುಮಾನದ ತಕ್ಕಂತೆ ಮಳೆ ಆರಂಭವಾಗಿದೆ. ಪ್ರಸಕ್ತ ವರ್ಷ ಮುಂಗಾರು ಬೆಳೆ ಉತ್ತಮ ಫಸಲನ್ನು ಪಡೆಯುತ್ತೇವೆ ಎಂಬ ಬಹುನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ಕಳೆದ ಮೂರು ತಿಂಗಳಿಂದ ಸತತವಾಗಿ ಮಳೆ ಸುರಿದ ಪರಿಣಾಮ ಬೆಳೆದು ನಿಂತ ಬೆಳೆಹಾನಿ ಅನುಭವಿಸುವಂತಾಗಿದೆ.

ತಾಲೂಕಿನ ಒಟ್ಟು ಭೂ ವಿಸ್ತೀರ್ಣದಲ್ಲಿ ಶೇ. ೭೦ರಷ್ಟು ಒಣ ಬೇಸಾಯ ಪದ್ಧತಿ ಅಳವಡಿಸಿದ್ದಾರೆ. ಹೀಗಾಗಿ ಮಳೆ ಆಶ್ರಿತ ಬೆಳೆಯನ್ನೇ ಹೆಚ್ಚಿನ ರೈತರು ಅವಲಂಬಿತರಾಗಿದ್ದಾರೆ. ಬೆಳೆ ಬಾರದೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮುಂಗಾರು ಬೆಳೆಗಳಾದ ಗೋವಿನಜೋಳ, ಭತ್ತ, ಸೋಯಾಬಿನ್, ಹೆಸರು, ಹತ್ತಿ ಸೇರಿದಂತೆ ಹಲವು ಬೆಳೆಗಳು ಮಳೆ ನೀರಿನಲ್ಲಿ ನಿಂತು ಹಾನಿಯಾಗಿವೆ. ಈ ಕುರಿತು ಬೆಳಹಾನಿ ಸರ್ವೇ ಕಾರ್ಯ ಕೈಗೊಳ್ಳಬೇಕು. ಅಧಿಕಾರಿಗಳು ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಸಬೇಕಿದೆ. ಹಾನಿಯಾದ ರೈತನಿಗೆ ನ್ಯಾಯ ಸಿಗಬೇಕು ಎಂದು ರೈತ ಸಂಘಟನೆಗಳು ತಹಸೀಲ್ದಾರರಿಗೆ ಮನವಿ ಮಾಡಿದ್ದಾರೆ. ಆದರೂ ಯಾವುದೇ ಹಾನಿ ಸರ್ವೇ ಕಾರ್ಯ ಕೈಗೊಂಡಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.ತಾಲೂಕಿನ ದುಂಡಶಿ, ಮಡ್ಲಿ, ಶೀಲವಂತಸೋಮಾಪೂರ, ಕುನ್ನೂರ, ಅಡವಿಸೋಮಾಪೂರ, ತಡಸ, ಮುಳಕೇರಿ, ಶ್ಯಾಬಳದಲ್ಲಿ ವಿಪರೀತ ಮಳೆಯಾಗಿದ್ದರಿಂದ ಸಾಕಷ್ಟು ಬೆಳೆಗಳು ಹಾನಿಯಾದ ಕುರಿತು ದುಂಡಶಿ ರೈತ ಸಂಪರ್ಕ ಕೇಂದ್ರದಲ್ಲಿ ರೈತ ಮುಖಂಡರು ಶಿಗ್ಗಾಂವಿ ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.ಗ್ರಾಮಗಳಿಗೆ ಹುಲಸೋಗಿ, ಹಿರೇಬೆಂಡಿಗೇರಿ, ಕಡಳ್ಳಿ, ಎನ್.ಎಂ. ತಡಸ, ತಿಮ್ಮಾಪೂರ, ಚಿಕ್ಕಬೆಂಡಿಗೇರಿ, ಪಾಣಿಗಟ್ಟಿ, ಹುಲಗೂರ, ಚಿಕ್ಕಮಲ್ಲೂರು, ಹಿರೇಮಲ್ಲೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ನೀರಿನಿಂದ ಸುಮಾರು ೭೦ ಸಾವಿರ ಎಕರೆಗಿಂತ ಹೆಚ್ಚು ಬೆಳೆ ಸಂಪೂರ್ಣ ಮಣ್ಣುಪಾಲಾಗಿದೆ ಎಂದು ರೈತ ಮುಖಂಡ ಶಂಕರಗೌಡ ಪಾಟೀಲ ತಿಳಿಸಿದರು.

೧೦ ದಿನ ಗಡುವು: ಬೆಳೆಹಾನಿ ಪರಿಹಾರ ಹಾಗೂ ಮಧ್ಯಂತರ ವಿಮೆ ಹಣವನ್ನು ೧೦ ದಿನದೊಳಗೆ ರೈತರಿಗೆ ನೀಡದಿದ್ದರೆ ಸೆ. ೧ರಂದು ದುಂಡಶಿ ಹೋಬಳಿಯ ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಕೆವಿಜಿ ಬ್ಯಾಂಕ್ ಎದುರು ಹಾಗೂ ತಡಸ- ಹಾನಗಲ್ಲ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರಾದ ವಿರುಪಾಕ್ಷಗೌಡ ಪಾಟೀಲ, ಈಶ್ವರಗೌಡ(ಮುತ್ತಣ್ಣ) ಎಸ್. ಪಾಟೀಲ ಎಚ್ಚರಿಕೆಯನ್ನು ನೀಡಿದ್ದಾರೆ.ಶೀಘ್ರ ವರದಿ: ಸರ್ಕಾರಕ್ಕೆ ಬೆಳೆಹಾನಿ ವರದಿ ಬೆಳೆಹಾನಿ ಕುರಿತು ಸದ್ಯದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಮನೆಹಾನಿ ಆಗಿರುವುದನ್ನು ಕಂದಾಯ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸೇರಿ ಜಂಟಿಯಾಗಿ ಪರಿಶೀಲನೆ ಹಮ್ಮಿಕೊಳ್ಳಲಾಗುವುದು. ಹಾನಿಯಾಗಿರುವ ಕುರಿತು ತಕ್ಷಣ ಸರ್ಕಾರದ ವರದಿ ಕಳುಹಿಸಲಾಗುತ್ತಿದೆ ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ತಿಳಿಸಿದ್ದಾರೆ.