ಸಾರಾಂಶ
ವಿಶೇಷ ವರದಿಕನ್ನಡಪ್ರಭ ವಾರ್ತೆ ಮಂಗಳೂರು
ಮೇ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಅಡಕೆ ಬೆಳೆಗೆ ಕೊಳೆ ಅಥವಾ ಮಹಾಲಿ ರೋಗದ ಬಾಧೆ ವಿಸ್ತರಿಸುತ್ತಿದೆ. ಈಗಾಗಲೇ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗದಿಂದ ಬಸವಳಿದ ಬೆಳೆಗಾರರು ಮತ್ತಷ್ಟು ಹೈರಾಣು ಆಗುವಂತೆ ಮಾಡಿದೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಎಳೆ ಅಡಕೆಗೆ ಬೋರ್ಡೋ ದ್ರಾವಣವನ್ನು ಸಿಂಪಡಿಸಿ ಈ ರೋಗದ ತಡೆಗೆ ಕ್ರಮ ಕೈಗೊಳ್ಳುವುದು ವಾಡಿಕೆ. ಆದರೆ ಈ ಬಾರಿ ಮಳೆಯ ಅವಾಂತರದಿಂದಾಗಿ ಒಮ್ಮೆಯೂ ಸಿಂಪಡಣೆ ಮಾಡದವರೇ ಜಾಸ್ತಿ. ಪರಿಣಾಮವಾಗಿ ಕೊಳೆ ರೋಗ ಉಲ್ಬಣಿಸುತ್ತಿದೆ.ಕರ್ನಾಟಕದಲ್ಲಿ ಸುಮಾರು ಎಂಟು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಇದೆ. ಇಲ್ಲಿ ಸುಮಾರು 12 ಲಕ್ಷ ಟನ್ ಅಡಕೆ ಉತ್ಪಾದನೆ ಆಗುತ್ತಿದೆ. ರಾಜ್ಯದ ಅಡಕೆ ಕೃಷಿಯಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಸಾಂಪ್ರದಾಯಿಕವಾಗಿ ಮುಂಚೂಣಿಯಲ್ಲಿವೆ. ಈ ಪ್ರದೇಶಗಳ ಅಡಕೆ ತೋಟಗಳು ತುಂಬ ಹಳತು ಆಗಿರುವ ಕಾರಣ ಈ ಮರಗಳಿಗೆ ಏರಿ ಔಷಧಿ ಸಿಂಪಡಣೆ ಮತ್ತು ಕೊಯ್ಲು ಕಷ್ಟ ಸಾಧ್ಯ.
ಔಷಧ ಸ್ಪ್ರೇಗೆ ನಿರಂತರ ಮಳೆ ಅಡ್ಡಿ:ಕರಾವಳಿ ಭಾಗಗಳಲ್ಲಿ ಮೇ 17ರಿಂದ ಮುಂಗಾರು ಪೂರ್ವ, ಬಳಿಕ ಮುಂಗಾರು ಮಳೆ ಆರಂಭವಾಗಿದೆ. ಮೇ ತಿಂಗಳ ಕೊನೆಯ ನಾಲ್ಕು ದಿನಗಳಲ್ಲಿ ಮಳೆಗೆ ಬಿಡುವು ಬಿಟ್ಟರೆ, ಉಳಿದಂತೆ ಎಲ್ಲ ದಿನಗಳಲ್ಲೂ ಸಂಜೆ ವೇಳೆಗೆ ಮಳೆ ಸುರಿದಿದೆ. ಅಲ್ಲದೆ ಮುಂಗಾರು ಶುರುವಾದ ಬಳಿಕ ನಿತ್ಯವೂ ಮಳೆ ಸುರಿಯತೊಡಗಿದೆ. ಇದರಿಂದಾಗಿ ಅಡಕೆ ತೋಟಗಳಿಗೆ ಸೂಕ್ತ ಸಮಯದಲ್ಲಿ ಔಷಧ ಸಿಂಪರಣೆ ಸಾಧ್ಯವಾಗಿಲ್ಲ ಎನ್ನುವುದು ಕೃಷಿಕರ ಅಳಲು.
ಕಳೆದ ಮೂರು ತಿಂಗಳ ಅವಧಿಯಲ್ಲಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮವೊಂದರಲ್ಲೇ 3 ಸಾವಿರ ಮಿಲಿ ಮೀಟರ್ ಮಳೆ ಸುರಿದಿದೆ. ಇಲ್ಲಿ ಮೇ ತಿಂಗಳಲ್ಲಿ 990 ಮಿ.ಮೀ, ಜೂನ್‌ನಲ್ಲಿ 1,090 ಮಿ.ಮೀ ಹಾಗೂ ಜುಲೈನಲ್ಲಿ 21ರ ವರೆಗೆ 1,200 ಮಿ.ಮೀ. ಮಳೆಯಾಗಿದೆ.ಈ ಬಾರಿ ಸುಳ್ಯ, ಪುತ್ತೂರು, ವಿಟ್ಲ ಹಾಗೂ ಕಾಸರಗೋಡು ಭಾಗಗಳಲ್ಲಿ ಅಡಕೆಗೆ ವ್ಯಾಪಕ ಪ್ರಮಾಣದಲ್ಲಿ ಕೊಳೆರೋಗ ಆವರಿಸಿದೆ. ಈಗಾಗಲೇ ಸುಮಾರು ಶೇ.10ರಿಂದ ಶೇ.15ರಷ್ಟು ಫಸಲು ನಷ್ಟವನ್ನು ಕೃಷಿ ತಜ್ಞರು ಹೇಳುತ್ತಿದ್ದಾರೆ. ಜುಲೈ ಕೊನೆ ವರೆಗೆ ನಿರಂತರ ಮಳೆ ಹೀಗೆಯೇ ಮುಂದುವರಿದರೆ ಕೊಳೆರೋಗ ಮತ್ತಷ್ಟು ವ್ಯಾಪಿಸಿ ಈ ಫಸಲು ವರ್ಷದಲ್ಲಿ ಅಡಕೆ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿತಗೊಳ್ಳುವ ಆತಂಕವನ್ನು ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ.
ಕೊಳೆ ರೋಗಕ್ಕಿರುವ ಒಂದೇ ಒಂದು ಪರಿಹಾರವೆಂದರೆ ಬೋರ್ಡೋ ದ್ರಾವಣ. ಇದನ್ನು ಮಳೆಗಾಲ ಆರಂಭವಾಗಿ ಕನಿಷ್ಟ ಮೂರು ಬಾರಿಯಾದರೂ ಸಿಂಪಡಿಸಬೇಕು. ಆದರೆ ಮಳೆಯೇ ಬಿಡುವು ನೀಡದಿದ್ದರೆ ಔಷಧ ಸಿಂಪಡಿಸಿದರೂ ಪ್ರಯೋಜನವಾಗದು. ಕಾರ್ಮಿಕರ ಕೊರತೆಯ ಈ ದಿನಗಳಲ್ಲಿ ಔಷಧ ಸಿಂಪರಣೆಗೆ ಫೈಬರ್ ದೋಟಿಯನ್ನು ಬಳಸುತ್ತಿದ್ದಾರೆ. ಇದು ಪ್ರಯೋಜನಕಾರಿಯಾದರೂ ಬಹಳಷ್ಟು ಮಂದಿಗೆ ಇದನ್ನು ಕೊಂಡುಕೊಳ್ಳುವುದು ಅಸಾಧ್ಯ, ಕಾರಣ ಇದಕ್ಕೆ ತಗಲುವ ಅಧಿಕ ವೆಚ್ಚ ಎನ್ನುವುದು ಸಣ್ಣ ಬೆಳೆಗಾರರ ಅಳಲು.ಬೆಳೆಗಾರರಿಗೆ ಮುನ್ನೆಚ್ಚರಿಕೆಗೆ ಇಲಾಖೆ ಸೂಚನೆ
ಪ್ರಸ್ತುತ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಲವೆಡೆ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಮಳೆ ಇದೇ ರೀತಿ ಮುಂದುವರಿದರೆ ಆಗಸ್ಟ್ ನಂತರ ಅಡಕೆಗೆ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕಾ ಇಲಾಖೆ ಸೂಚಿಸಿದೆ.ಅಡಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶ/ಕೀಟ/ರೋಗ ನಿರ್ವಹಣೆ ಸಂಬಂಧ ಗೊಬ್ಬರ/ಸೂಕ್ಷ್ಮ ಪೋಷಕಾಂಶ/ಕೀಟನಾಶಕ/ಶಿಲೀಂಧ್ರನಾಶಕಗಳನ್ನು ಖರೀದಿಸುವ ಬೆಳೆಗಾರರಿಗೆ ರೈತರು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿಗೂ ಹಲವಾರು ಅಡಿಕೆ ಬೆಳೆಗಾರರಿಗೆ ಅಡಕೆ ಬೆಳೆಗೆ ಪ್ರಥಮ ಸುತ್ತಿನ ಔಷಧಿಯೂ ಸಿಂಪಡಿಸಿ ಆಗಿಲ್ಲ. ಹೀಗಾಗಿ ಹಲವು ಕಡೆ ಕೊಳೆರೋಗ ಬಾಧಿಸಿರುವ ಸುದ್ದಿ ಕೇಳಿಬರುತ್ತಿದೆ. ಮಳೆ ಇನ್ನೂ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಕೊಳೆರೋಗ ವ್ಯಾಪಕವಾಗುವ ಲಕ್ಷಣ ಕಾಣಿಸುತ್ತಿದೆ. ಬೇಸಗೆಯಲ್ಲಿ ಎಳೆ ಅಡಿಕೆ ಉದುರಿ ನಷ್ಟವಾದರೆ ಈಗ ಕೊಳೆರೋಗದಿಂದ ಅಡಕೆ ಬೀಳುತ್ತಿದೆ. ಅಡಕೆ ಬೆಳೆಗಾರರಿಗೆ ಈಗ ವಾತಾವರಣವೇ ಸಂಕಷ್ಟವಾಗುತ್ತಿದೆ. ಅಡಕೆ ರೋಗಗಳು ಮತ್ತು ಸಮಸ್ಯೆಗಳ ನಿವಾರಣೆ ಬಗ್ಗೆ ಕಾಲಕಾಲಕ್ಕೆ ಮಾಹಿತಿಗಳ ಅಗತ್ಯ ಇದೆ.- ಮಹೇಶ್ ಪುಚ್ಚಪ್ಪಾಡಿ, ಅಧ್ಯಕ್ಷರು ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ, ಪುತ್ತೂರು
ಕಳೆದ ಬಾರಿ ಹವಾಮಾನದ ವೈಪರೀತ್ಯದಿಂದಾಗಿ ಶೇಕಡಾ ಐವತ್ತರಷ್ಟು ಬೆಳೆ ನಾಶವಾಗಿದ್ದು, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕಂಡು ಬಂದ ಉಷ್ಣತೆ ಮತ್ತು ಬಳಿಕದ ಮಳೆಯಿಂದಾಗಿ ಎಳೆ ಅಡಕೆ ಉದುರತೊಡಗಿದೆ. ಈಗ ಕೊಳೆ ರೋಗ ಬಂದು ಈ ಸಾಲಿನಲ್ಲಿ ಅಧಿಕ ಬೆಳೆ ನಾಶವಾಗುವ ಚಿಂತೆಯಲ್ಲಿ ಬೆಳೆಗಾರರು ಇದ್ದಾರೆ. ಈ ಬಗ್ಗೆ ಇಲಾಖೆ ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.-ಡಾ.ವಿಘ್ನೇಶ್ವರ ವರ್ಮುಡಿ, ಕೃಷಿ ಮಾರುಕಟ್ಟೆ ತಜ್ಞರು