ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿ ವೀಕ್ಷಣೆ

| Published : Jan 14 2025, 01:00 AM IST

ಸಾರಾಂಶ

ಹು-ಧಾ ಮಹಾನಗರಕ್ಕೆ ನೀರಸಾಗರ ಕೆರೆಯಿಂದ 35 ಎಂಎಲ್‍ಡಿ ನೀರು, ಸವದತ್ತಿ ಜಾಕ್‍ವೆಲ್ ಮೂಲಕ 220 ಎಂಎಲ್‍ಡಿ ನೀರು ಪೂರೈಕೆಯಾಗುತ್ತಿದೆ. ಇದು ನಿರಂತರ ನೀರು ಯೋಜನೆ ಅನುಷ್ಠಾನಕ್ಕೆ ಸಾಲದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 43 ಎಂಎಲ್‍ಡಿ ನೀರು ಪಡೆಯುವ ಯೋಜನೆ ಪ್ರಗತಿಯಲ್ಲಿದೆ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿಗಳ ಕುರಿತು ಮೇಯರ್‌, ಆಯುಕ್ತರು ಹಾಗೂ ಸದಸ್ಯರು ಸೋಮವಾರ ಸ್ಥಳ ವೀಕ್ಷಿಸಿದರು.

ಮೇಯರ್‌ ರಾಮಪ್ಪ ಬಡಿಗೇರ, ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ಸದಸ್ಯರು ನೀರಸಾಗರ ಕೆರೆ ಚಾಕವೆಲ್, ಕಣವಿ ಹೊನ್ನಾಪುರ ನೀರು ಶುದ್ಧೀಕರಣ ಘಟಕ, ಸವದತ್ತಿ ಜಾಕ್‍ವೆಲ್ ಹಾಗೂ ಅಮ್ಮಿನಭಾವಿಯಲ್ಲಿರುವ ಮಲಪ್ರಭಾ ನೀರು ಶುದ್ಧೀಕರಣ ಘಟಕ ವೀಕ್ಷಿಸಿದರು. ಜತೆಗೆ ಕೆಯುಐಡಿಎಫ್‍ಸಿ, ಎಲ್ ಆ್ಯಂಡ್ ಟಿ ಸಹಯೋಗದಲ್ಲಿ ಆಯಾ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.

ಸವದತ್ತಿ ವಾಟರ್ ಪ್ಲ್ಯಾಂಟ್‍ನಲ್ಲಿ ಪಿಪಿಟಿ ಪ್ರೆಸೆಂಟೇಶನ್ ನೀಡಿದ ಅಧಿಕಾರಿಗಳು, ಹು-ಧಾ ಮಹಾನಗರಕ್ಕೆ ನೀರಸಾಗರ ಕೆರೆಯಿಂದ 35 ಎಂಎಲ್‍ಡಿ ನೀರು, ಸವದತ್ತಿ ಜಾಕ್‍ವೆಲ್ ಮೂಲಕ 220 ಎಂಎಲ್‍ಡಿ ನೀರು ಪೂರೈಕೆಯಾಗುತ್ತಿದೆ. ಇದು ನಿರಂತರ ನೀರು ಯೋಜನೆ ಅನುಷ್ಠಾನಕ್ಕೆ ಸಾಲದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 43 ಎಂಎಲ್‍ಡಿ ನೀರು ಪಡೆಯುವ ಯೋಜನೆ ಪ್ರಗತಿಯಲ್ಲಿದೆ ಎಂದರು.

ಹೆಚ್ಚುವರಿ ನೀರು ಪಡೆಯಲು ಈಗಾಗಲೇ 17 ಕಿಮೀ ವ್ಯಾಪ್ತಿಯಲ್ಲಿ 10 ಕಿಮೀ ಪೈಪ್‍ಲೈನ್, ಅಮ್ಮಿನಭಾವಿಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್ ಒಳಗಾಗಿ ಇದಕ್ಕೆ ಸಂಬಂಧಿಸಿದ ಕಾಮಗಾರಿ ಪೂರ್ಣಗೊಳ್ಳಲಿವೆ. ಅಮ್ಮಿನಭಾವಿ ಘಟಕದಿಂದ ರಾಯಪುರದಲ್ಲಿ ಸ್ಥಾಪಿಸಿದ ನೀರು ಸಂಗ್ರಹಣಾ ಘಟಕದಿಂದ ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಕ್ರಮವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಇರುವ 54 ಟ್ಯಾಂಕ್‍ಗಳ ಜತೆ 14 ಓವರ್ ಹೆಡ್ ಟ್ಯಾಂಕ್, 9 ಗ್ರೌಂಡ್ ಟ್ಯಾಂಕ್ ಕಾಮಗಾರಿಯೂ ನಡೆದಿದ್ದು, ಇದರಲ್ಲಿ 5 ಟ್ಯಾಂಕ್‍ಗಳ ಕಾರ್ಯವೂ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಅವಳಿ ನಗರದಲ್ಲಿ ಪೈಪ್‍ಲೈನ್ ಸಂಪರ್ಕ ಜಾಲ ತ್ವರಿತವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಬ್ ಕಾಂಟ್ರ್ಯಾಕ್ಟ್ ನೀಡಿ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಸದ್ಯ 1,638 ಸಂಪರ್ಕ ಜಾಲವಾಗಬೇಕಿದ್ದು, ಈಗ ಶೇ. 26ರಷ್ಟು ಮಾತ್ರ ಸಾಧನೆಯಾಗಿದೆ. ಸವದತ್ತಿ ಜಾಕವೆಲ್‍ನಿಂದ ನೀರು ತರುವ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಇದರೊಟ್ಟಿಗೆ ನಗರದಲ್ಲಿ ಪೈಪ್‍ಲೈನ್ ಜಾಲವು ವೇಗ ಪಡೆದರೆ, ಆದಷ್ಟು ಬೇಗ ಅವಳಿನಗರಕ್ಕೆ ನಿರಂತರ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜು ಕಮತಿ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.