ಸಾರಾಂಶ
ರುದ್ರೇಶ ಘಾಳಿ ಅವರ ವರ್ಗಾವಣೆ ಆದೇಶವನ್ನು ತಡೆ ಹಿಡಿಯುವಂತೆ ಹಾಗೂ ಹಾಲಿ ಸ್ಥಳದಲ್ಲಿಯೇ ಅವರನ್ನು ಮುಂದುವರೆಸುವಂತೆ ಆಗ್ರಹಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಸದಸ್ಯರು ಗುರುವಾರ ಇಲ್ಲಿನ ಪಾಲಿಕೆ ಕಚೇರಿ ಎದುರು ಪ್ರತಿಭಟನೆ
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರ ವರ್ಗಾವಣೆ ಆದೇಶವನ್ನು ತಡೆ ಹಿಡಿಯುವಂತೆ ಹಾಗೂ ಹಾಲಿ ಸ್ಥಳದಲ್ಲಿಯೇ ಅವರನ್ನು ಮುಂದುವರೆಸುವಂತೆ ಆಗ್ರಹಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಸದಸ್ಯರು ಗುರುವಾರ ಇಲ್ಲಿನ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅವಳಿ ನಗರದಲ್ಲಿ ಹಲವಾರು ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಅನೇಕ ಸಮಸ್ಯೆಗಳನ್ನು ಪಾಲಿಕೆ ಆಯುಕ್ತ ರುದ್ರೇಶ ಘಾಳಿಯವರು ಹಂತ-ಹಂತವಾಗಿ ಪರಿಹರಿಸುತ್ತಾ ಬಂದಿದ್ದಾರೆ. ಆಯುಕ್ತರ ಶ್ರಮದ ಫಲವಾಗಿ ಪಾಲಿಕೆಯ ಆರ್ಥಿಕ ಪರಿಸ್ಥಿತಿಯೂ ಸಹ ಸುಧಾರಣೆಯತ್ತ ಸಾಗುತ್ತಿದೆ. ಅವರ ಸೇವಾವಧಿ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ, ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ, ದಿಟ್ಟಕ್ರಮಗಳನ್ನು ಕೈಗೊಳ್ಳುತ್ತಾ ಬಂದಿರುವ, ದಕ್ಷ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿರುವ ಘಾಳಿಯವರನ್ನು ಸರ್ಕಾರ ಪ್ರಭಾವಿಗಳ ಒತ್ತಡಕ್ಕೆ ಮಣಿದು, ವರ್ಗಾಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಹಿಂದಿನ ಆಯುಕ್ತರು ಪಾಲಿಕೆ ಗುತ್ತಿಗೆದಾರರ ಬಿಲ್ ಪಾವತಿ ಮಾಡದೇ, ಅನ್ಯಾಯ ಮಾಡುತ್ತಾ ಬಂದಿದ್ದರು. ಅದರ ಪರಿಣಾಮ ಅನೇಕ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದರು. ಆದರೆ, ಘಾಳಿಯವರ ಅಧಿಕಾರಾವಧಿಯಲ್ಲಿ ಗುತ್ತಿಗೆದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಜತೆಗೆ ಪೌರಕಾರ್ಮಿಕರು, ಪಾಲಿಕೆ ಸಿಬ್ಬಂದಿಗಳಿಗೆ ಸಕಾಲಕ್ಕೆ ವೇತನ ಹಾಗೂ ಇತರೆ ಸೇವಾ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ. ಕೂಡಲೇ ಸರಕಾರ ತನ್ನ ಆದೇಶವನ್ನು ರದ್ದುಗೊಳಿಸುವ ಮೂಲಕ, ಪುನಃ ಘಾಳಿಯವರನ್ನು ಪಾಲಿಕೆ ಆಯುಕ್ತರನ್ನಾಗಿ ಕನಿಷ್ಠ 2 ವರ್ಷ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ಗುತ್ತಿಗೆದಾರರ ಮನವಿಯನ್ನು ಪರಿಗಣಿಸದೇ ಹೋದಲ್ಲಿ ಸದ್ಯದಲ್ಲಿಯೇ ಹುಬ್ಬಳ್ಳಿಯ ಸ್ಟೇಶನ್ ರಸ್ತೆಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಮೋಹನ ಜಿ. ಗೌಡರ, ಪ್ರಧಾನ ಕಾರ್ಯದರ್ಶಿ ಪಂಪಣ್ಣ ಐ.ಎ, ಉಪಾಧ್ಯಕ್ಷ ವಾಸಿಮ್ ಸನದಿ, ಮದನ ಪಂಚಪುತ್ರ, ಪ್ರಶಾಂತ ಅಣ್ಣಿಗೇರಿ, ವಿವೇಕಾನಂದ ಭೋವಿ, ಶಂಕರ ಬೋಜಗಾರ, ಜಾವಿದ್ ಕೊಪ್ಪಳ, ಶಶಿಧರ ಚಟ್ನಿ, ಇಜಾಜಿ ಬೇಪಾರಿ ಸೇರಿದಂತೆ ಅನೇಕರಿದ್ದರು.