ಸಾರಾಂಶ
ಸುರಪುರ ನಗರದ ದರಬಾರ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಸುರಪುರ
ನಗರದ ದರ್ಬಾರ್ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ದಿನಾಚರಣೆ ನಿಮಿತ್ತ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಪಂ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ನ್ಯಾಯಾಧೀಶ ಮಾರುತಿ ಕೆ.ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ದೈಹಿಕವಾಗಿ ಸಬಲರಾಗದ ಮಕ್ಕಳಿಗೆ ಕಷ್ಟದ ಕೆಲಸಗಳಿಗೆ ಕಳುಹಿಸುವುದು ಕಾನೂನು ಪ್ರಕಾರ ಅಪರಾಧ. 16 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕೊಡಿಸದೆ ಕೆಲಸಕ್ಕೆ ನೂಕಿದರೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿಯನ್ನು ಬುಡಸಮೇತ ಕಿತ್ತುಹಾಕಲು ಸಮುದಾಯ ಕೈ ಜೋಡಿಸಬೇಕು ಎಂದರು.ಕಾರ್ಯಕ್ರಮಕ್ಕೂ ಮುನ್ನ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಅಂಗವಾಗಿ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ಮಹಾತ್ಮಾ ಗಾಂಧಿ ವೃತ್ತದವರೆಗೆ ಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ, ಸಾಹಿತಿ ಗುರುಪ್ರಸಾದ ವೈದ್ಯ ಹಾಗೂ ನ್ಯಾಯವಾದಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು.
ತಹಸೀಲ್ದಾರ್ ಕೆ. ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಸುರೇಶ ಪಾಟೀಲ್, ಅಪರ ಸರ್ಕಾರಿ ವಕೀಲ ನಂದನಗೌಡ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಬಸವರಾಜ ಸಜ್ಜನ್, ಬಿಆರ್‌ಪಿ ಖಾದರ್ ಪಟೇಲ, ಕಾರ್ಮಿಕ ನಿರೀಕ್ಷಕ ಗಂಗಾಧರ ಮಠಪತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಂಗಿಹಾಳ, ಶಾಲೆಯ ಮುಖ್ಯಗುರು ಸೋಮರಡ್ಡಿ ಮಂಗಿಹಾಳ ಸೇರಿದಂತೆ ಇತರರಿದ್ದರು.