ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಣೇಶ ಹಬ್ಬ ಅದ್ಧೂರಿ ಆಚರಣೆಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. ಶಾಂತಿ, ಸೌಹಾರ್ದತೆಯ ಗಣೇಶ ಹಬ್ಬ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬುಧವಾರ ನಡೆದ ಗಣೇಶ ಉತ್ಸವದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶ ಹಬ್ಬ ಆಚರಣೆ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಹಾಳಾಗದಂತೆ ಗಣಪತಿಯ ಮಣ್ಣಿನ ಮೂರ್ತಿಗಳನ್ನು ಸ್ಥಾಪಿಸಬೇಕಿದೆ. ಮೂರ್ತಿ ಸ್ಥಾಪನೆಯ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.ಪೂರ್ವಾನುಮತಿ ಕಡ್ಡಾಯ: ಗಣೇಶ ಮೂರ್ತಿ ಪ್ರತಿಷ್ಠಾನಕ್ಕಾಗಿ ನಗರದ 8 ಪೊಲೀಸ್ ಠಾಣೆಗಳಲ್ಲಿ ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿಗಾಗಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ ಕಚೇರಿಗಳಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣೇಶ ವೀಕ್ಷಣೆಗೆ ಬರುವ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಮಾರ್ಗ ಕಲ್ಪಿಸಬೇಕು. ಮೂರ್ತಿ ವಿಸರ್ಜನೆ ಮಾಡುವ ದಿನ, ಸಮಯದ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.ಗಣೇಶ ಮಹಾ ಮಂಡಳಿ ಪದಾಧಿಕಾರಿಗಳು ಮಾತನಾಡಿ, ಎರಡ್ಮೂರು ವರ್ಷಗಳಿಂದ ವಿದ್ಯುತ್ ಸಮಸ್ಯೆಯಾಗಿದೆ. ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಹೆಚ್ಚಿನ ಬಸ್ ಕಾರ್ಯಾಚರಣೆ:
ಗಣೇಶ ಮೂರ್ತಿ ಪ್ರತಿಷ್ಠಾಪನೆಯ 5 ದಿನಗಳ ನಂತರ ಸಾರ್ವಜನಿಕರು ಹೆಚ್ಚು ಭಾಗವಹಿಸುವ ಸಾಧ್ಯತೆ ಇದೆ. ಆದ್ದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲಗುವ ನಿಟ್ಟಿನಲ್ಲಿ ಕೆಎಸ್ಆರ್.ಟಿಸಿಯಿಂದ ಹೆಚ್ಚಿನ ಬಸ್ ಗಳ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ್ ಮಾತನಾಡಿ, ಗಣೇಶ ಮೂರ್ತಿಗಳು ಹೆಚ್ಚು ಎತ್ತರವಾಗಿರದಂತೆ ನೋಡಿಕೊಳ್ಳಬೇಕು. ಇದರಿಂದ ಸಂಭವನೀಯ ಅನಾಹುತ ತಡೆಗಟ್ಟಬಹುದಾಗಿದೆ. ಡಿ.ಜೆ. ಅಳವಡಿಕೆಯಲ್ಲಿ ಮಾರ್ಗಸೂಚಿ ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಲಾಗುವುದು. ಮಂಡಳಿಗಳ ಮುಖ್ಯಸ್ಥರು ಪೊಲೀಸ್ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಗಲಭೆ ಅಥವಾ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.ಈ ವೇಳೆ ಮಾತನಾಡಿದ ವಿವಿಧ ಗಣೇಶ ಉತ್ಸವ ಮಹಾಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಗಣೇಶ ಮಂಟಪಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ಮನವಿ ಮಾಡಿದರು. ಎಸ್ಪಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಎಸಿಪಿ ಸದಾಶಿವ ಕಟ್ಟಿಮನಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ನಗರ ಸೇವಕರು, ವಿವಿಧ ಗಣೇಶ ಮಹಾಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ಅಪಾಯಕಾರಿ ಬ್ಯಾನರ್ ಅಳವಡಿಕೆಗೆ ನಿಷೇಧ:ಅತೀ ದೊಡ್ಡ ಬ್ಯಾನರ್ ಅಳವಡಿಸಿದ್ದಲ್ಲಿ ವಿದ್ಯುತ್ ತಂತಿ ತಗುಲಿ ಅಪಾಯ ಎದುರಾಗುವ ಸಂಭವವಿದೆ. ಬ್ಯಾನರ್ ಅಳವಡಿಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ಹಸಿರು ಪಟಾಕಿ ಮಾತ್ರ ಖರೀದಿ ಮಾಡಬೇಕು. ಒಂದು ವೇಳೆ ಅನಧಿಕೃತ ಪಟಾಕಿ ಖರೀದಿ ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಾಯ್ದೆಯಡಿ ಕ್ರಮ ಜರುಗಿಲಾಗುವುದು ಎಂದು ಡಿಸಿಪಿ ರೋಹನ್ ಜಗದೀಶ ತಿಳಿಸಿದರು.