ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಕೊಡುಗೆ!

| Published : Jan 03 2025, 12:30 AM IST

ಸಾರಾಂಶ

ಜಿಲ್ಲಾ ಕೇಂದ್ರವಾದರೂ ನಿರೀಕ್ಷಿತ ಅಭಿವೃದ್ಧಿ ಹೊಂದದ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾನಮಾನ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಈ ಹೋರಾಟ ಗಂಭೀರತೆ ಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುರುವಾರ ಸಚಿವ ಸಂಪುಟದಲ್ಲಿ ಧಾರವಾಡ ಜನತೆಯ ಮಹತ್ತರ ಬೇಡಿಕೆಗೆ ಅಸ್ತು ಎಂದಿದೆ.

ಬಸವರಾಜ ಹಿರೇಮಠ

ಧಾರವಾಡ

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಭಾಗ್ಯ ದೊರೆತಿದ್ದು, ಈ ಸ್ಥಾನಮಾನ ನೀಡುವ ಮೂಲಕ 2025ನೇ ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಧಾರವಾಡ ಜನರಿಗೆ ಭರ್ಜರಿ ಕೊಡುಗೆ ನೀಡಿದೆ.

ಜಿಲ್ಲಾ ಕೇಂದ್ರವಾದರೂ ನಿರೀಕ್ಷಿತ ಅಭಿವೃದ್ಧಿ ಹೊಂದದ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾನಮಾನ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಈ ಹೋರಾಟ ಗಂಭೀರತೆ ಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುರುವಾರ ಸಚಿವ ಸಂಪುಟದಲ್ಲಿ ಧಾರವಾಡ ಜನತೆಯ ಮಹತ್ತರ ಬೇಡಿಕೆಗೆ ಅಸ್ತು ಎಂದಿದೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಗುತ್ತಿದ್ದಂತೆ ಇಲ್ಲಿಯ ಪಾಲಿಕೆಯ ಆವರಣದಲ್ಲಿ ಹೋರಾಟಗಾರರು ಹಾಗೂ ಧಾರವಾಡದ ಜನರು ಪಟಾಕಿ ಸಿಡಿಸಿ, ಪರಸ್ಪರ ಧಾರವಾಡ ಪೇಢೆ ತಿನ್ನಿಸಿ ಸಂತಸ ಹಂಚಿಕೊಂಡರು. ಜೊತೆಗೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

62 ವರ್ಷಗಳ ನಂತರ:

ಹು-ಧಾ ಮಹಾನಗರ ಪಾಲಿಕೆಯು 1962ರಲ್ಲಿ ಬಿ.ಡಿ. ಜತ್ತಿ ಅವರು ಮುಖ್ಯಮಂತ್ರಿ ಸಮಯದಲ್ಲಿ ರಚನೆಯಾಗಿತ್ತು. ಬರೋಬ್ಬರಿ 62 ವರ್ಷಗಳ ನಂತರ ಈ ಮಹಾನಗರ ಪಾಲಿಕೆ ಪ್ರತ್ಯೇಕವಾಗಿದ್ದು ಇತಿಹಾಸವೇ ಸರಿ. ಪ್ರಸ್ತುತ ಹು-ಧಾ ಮಹಾನಗರ ಪಾಲಿಕೆಯಲ್ಲಿ 82 ವಾರ್ಡಗಳಿದ್ದು, ಓರ್ವ ಆಯುಕ್ತರು, ಮೇಯರ್‌, ಉಪ ಮೇಯರ್‌ ಇದ್ದಾರೆ. ಇದೇ ಸ್ಥಾನಮಾನ ಧಾರವಾಡಕ್ಕೂ ಸಿಗಲಿರುವುದು ಧಾರವಾಡ ಮಟ್ಟಿಗೆ ಮಹತ್ತರ ಸಂಗತಿ.

ಏ. 1ರಿಂದ ಹೊಸ ಪಾಲಿಕೆ?

ಪೌರಾಡಳಿತ ಇಲಾಖೆ ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಆರ್ಥಿಕ ವರ್ಷ ಏ. 1ರಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಕಾರ್ಯ ನಿರ್ವಹಿಸಲಿದೆ. ಧಾರವಾಡ ವ್ಯಾಪ್ತಿಯ 26 ವಾರ್ಡ್‌ಗಳನ್ನು ವಿಭಜಿಸಿ ಸದ್ಯದ ಧಾರವಾಡದ ಪಾಲಿಕೆ ಕಚೇರಿಯನ್ನು ಪ್ರಧಾನ ಕಚೇರಿಯನ್ನಾಗಿ ಕಾರ್ಯ ಶುರುವಾಗಲಿದೆ. 26 ವಾರ್ಡ್‌ಗಳ ಪಾಲಿಕೆ ಸದಸ್ಯರ ಪೈಕಿ ಓರ್ವ ಮೇಯರ್‌, ಓರ್ವ ಉಪ ಮೇಯರ್‌ ಆಯ್ಕೆ ಮಾಡಿ ಐಎಎಸ್‌ ಶ್ರೇಣಿಯ ಅಧಿಕಾರಿಯನ್ನು ಆಯುಕ್ತರನ್ನಾಗಿ ಮಾಡಲಾಗುತ್ತದೆ. ಬರುವ ದಿನಗಳಲ್ಲಿ ಧಾರವಾಡ ನಗರದ ಸಮೀಪದ ಬೇಲೂರು, ಚಿಕ್ಕಮಲ್ಲಿಗವಾಡ, ನರೇಂದ್ರ ಅಂತಹ ಊರುಗಳನ್ನು ಸಹ ಪಾಲಿಕೆ ವ್ಯಾಪ್ತಿಗೆ ಒಳಪಡಿಲಾಗುವುದು ಎಂಬ ಮಾಹಿತಿ ಇದೆ.

ಹೋರಾಟ ಹೀಗಿತ್ತು:

ಹಲವು ವರ್ಷಗಳಿಂದಲೂ ಪ್ರತ್ಯೇಕ ಪಾಲಿಕೆಗೆ ಹೋರಾಟ ಇದ್ದರೂ 2019ರಿಂದ ಹೋರಾಟ ಜೋರಾಯಿತು. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ರಚಿಸಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ, 14 ದಿನ ಪಾಲಿಕೆ ಎದುರು ಧರಣಿ ಹಾಗೂ ಮೆರವಣಿಗೆ ಮಾಡಲಾಯಿತು. 10 ಸಾವಿರಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹಣೆ ಮಾಡಲಾಗಿತ್ತು. ಧಾರವಾಡ ಜನರ ಒತ್ತಡದ ಹಿನ್ನೆಲೆಯಲ್ಲಿ ಪಾಲಿಕೆಯ ಧಾರವಾಡದ ಬಹುತೇಕ ಪಾಲಿಕೆ ಸದಸ್ಯರು ಪ್ರತ್ಯೇಕ ಪಾಲಿಕೆ ರಚಿಸದೇ ಇದ್ದಲ್ಲಿ ರಾಜೀನಾಮೆ ಕೊಡುತ್ತೇವೆ ಎಂಬ ಹೇಳಿಕೆ ಸಹ ನೀಡಿದರು. 2023ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ವೇಳೆ ಹಾಗೂ 2024ರ ಲೋಕಸಭಾ ಚುನಾವಣೆ ವೇಳೆ ಧಾರವಾಡ ಜನರ ಹೋರಾಟಕ್ಕೆ ಮಣಿದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಅಬ್ಬಯ್ಯ ಪ್ರಸಾದ, ಎನ್‌.ಎಚ್‌. ಕೋನರಡ್ಡಿ ಒಕ್ಕೊರಲಿನ ಬೆಂಬಲ ಸೂಚಿಸಿದರು. 2023 ಹಾಗೂ 2024ರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬಂದು ಸರ್ಕಾರ ಒಪ್ಪಿಗೆ ಸೂಚಿಸಿದರು.