ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಎಜೆ ಆಸ್ಪತ್ರೆಯ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಪಿಸಿಯೋಥೆರಪಿ ಇದರ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ಪಿಸಿಯೋಥೆರಪಿ ಕಾನ್ಫರೆನ್ಸ್- 2024ನ್ನು ತೆಲಂಗಾಣ ಕೈಗಾರಿಕಾ ಹಾಗೂ ವಾಣಿಜ್ಯ ಸಚಿವ ಡಿ.ಶ್ರೀಧರ್ ಬಾಬು ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, ಫಿಸಿಯೋಥೆರಪಿ ಚಿಕಿತ್ಸಾ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸವಾಲು ಇದೆ. ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಹೇಗೆ ಸಹಾಯ ಮಾಡುತ್ತದೆ, ವೈದ್ಯಕೀಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ನೆರವಾಗುವ ಬಗ್ಗೆ ಈ ಸಮ್ಮೇಳನ ಪೂರಕವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಪ್ರಾಮುಖ್ಯತೆ ಪಡೆದಿದೆ. ಹೊಸ ತಂತ್ರಜ್ಞಾನದ ಬಳಕೆಯಿಂದ ಫಿಸಿಯೋಥೆರಪಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ.ಯು.ಟಿ. ಇಫ್ತಿಕರ್ ಅಲಿ ಮಾತಾಡಿದರು.ಲಕ್ಷ್ಮೀ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಮಾತನಾಡಿ, ಫಿಸಿಯೋಥೆರಪಿ ಕ್ಷೇತ್ರಕ್ಕೆ ಇಂದು ದೇಶ ವಿದೇಶಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ. ಪಿಸಿಯೋಥೆರಪಿ ಕಲಿತ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಿಂದ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಬೆಂಗಳೂರು ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಡಾ.ವಿಶಾಲ್ ರಾವ್, ಟ್ರಸ್ಟ್ ಉಪಾಧ್ಯಕ್ಷ ಎ.ಪ್ರಶಾಂತ್ ಶೆಟ್ಟಿ, ಅಶ್ರಿತ ಪಿ.ಶೆಟ್ಟಿ, ಹರೀಶ್, ಚರಣ್ ಶೆಟ್ಟಿ, ಡಾ.ವೈಶಾಲಿ, ಡಾ.ಅಜಯ್ ಮತ್ತಿತರರು ಇದ್ದರು.ಕಾರ್ಯಕ್ರಮ ಸಂಘಟಕ ಡಾ.ಅಭಿಲಾಷ್ ಪಿ.ವಿ. ಸ್ವಾಗತಿಸಿದರು. ಲಕ್ಷ್ಮೀ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಕಾಲೇಜ್ ಪ್ರಾಂಶುಪಾಲ ಸಂಜಯ್ ಸ್ಯಾಮ್ಯೂವೆಲ್ ಪ್ರಾಸ್ತಾವಿಕ ಮಾತನ್ನಾಡಿದರು. ಹರೀಶ್ ಎಸ್. ಕೃಷ್ಣ ವಂದಿಸಿದರು.