ಸಾರಾಂಶ
ತುಮಕೂರು: ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಅತ್ಯಗತ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
ತಿಪಟೂರಿನ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ವತಿಯಿಂದ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ ಅಂಗವಾಗಿ ಕಾರ್ಯನಿರತ ಪರ್ತಕರ್ತರ ಒಂದು ದಿನದ ವಿಚಾರ ಸಂಕಿರಣ ಹಾಗೂ ವಿಶ್ವ ತೆಂಗು ದಿನದ ಅಂಗವಾಗಿ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಮೇಲ್ವಿಚಾರಣೆ ನಡೆಸಿ, ನಿಯಂತ್ರಣ ಮಾಡಲು, ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸರಿಯಾದ ಕಾನೂನುಗಳು ಇಲ್ಲದ ಕಾರಣ ಮನಃಬಂದಂತಹ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಇಂತಹ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ ಎಂದರು.
ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ನಾಲ್ಕನೇಯ ಅಂಗವಾಗಿ ಮಾಧ್ಯಮ ಕ್ಷೇತ್ರವನ್ನು ಗುರುತಿಸಲಾಗಿದೆ. ಎಂದಿಗೂ ಮಾಧ್ಯಮ ಕ್ಷೇತ್ರಕ್ಕೆ ಇರುವ ಅತಿ ದೊಡ್ಡ ಜವಾಬ್ದಾರಿ ಸಂವಿಧಾನದ ಆಶಯಗಳನ್ನುಅನುಷ್ಠಾನಗೊಳಿಸುವುದು, ಜೊತೆಗೆ ಜನರ ಪರ ಆಡಳಿತಕ್ಕೆ ಚುರುಕು ಮುಟ್ಟಿಸುವ, ತಪ್ಪುಗಳಾದರೆ ತಿದ್ದು ಸರಿದಾರಿಗೆ ತರುವ ಕಾರ್ಯವನ್ನು ಮಾಧ್ಯಮ ಕ್ಷೇತ್ರ ಮಾಡಬೇಕು. ಆದರೆ ಸಾಮಾಜಿಕ ಜಾಲತಾಣಗಳ ಪ್ರಮಾಣ ಹೆಚ್ಚಿದಾಗಿನಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಲವು ಸವಾಲುಗಳು ಎದುರಾಗಿವೆ ಎಂದರು.ಸಾಮಾಜಿಕ ಜಾಲತಾಣಗಳಿಂದ ವ್ಯಕ್ತಿಯ ವೈಯಕ್ತಿಕ ವಿಚಾರಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಇದರಿಂದಾಗಿ ಹಲವರಿಗೆ ತೊಂದರೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿಯಿಂದ ಬಿತ್ತರವಾಗುವ ಒಂದು ವಿಚಾರದಿಂದ ದೇಶ, ಸಮಾಜ, ವ್ಯಕ್ತಿಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿವೆ ಎಂದರು.
ಕರ್ನಾಟಕದಲ್ಲಿ ಬಹಳ ಉತ್ತಮ ಕಾರ್ಯಗಳನ್ನು ಮಾಧ್ಯಮದವರು ಮಾಡುತ್ತಿದ್ದಾರೆ. ಇಂದಿನ ಮಾಧ್ಯಮ ಕ್ಷೇತ್ರ ಕೆಲವು ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಕಟಣೆ ಮಾಡುತ್ತಿದ್ದು, ರಾಜಕೀಯವಾಗಿ ತಮ್ಮ ತೀರ್ಪು ನೀಡುವ ರೀತಿಯಲ್ಲಿ ಕೂತು ಚರ್ಚಿಸುತ್ತಾರೆ. ಟಿ.ವಿ.ಮಾಧ್ಯಮಗಳಲ್ಲಿ ವಿಶೇಷ ಸಂವಾದವನ್ನು ಏರ್ಪಡಿಸಿ ವೈಯಕ್ತಿಕವಾಗಿ ತೀರ್ಪು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಾಧ್ಯಮಗಳು ಸತ್ಯ ಏನು ಎಂಬುದನ್ನು ಜನರಿಗೆ ತಿಳಿಸಬೇಕೇ ಹೊರತು ಜನರ ಮುಂದೆ ತೀರ್ಪು ನೀಡಲು ಮುಂದಾಗಬಾರದು ಎಂದರು.ಕಲಾಕೃತಿಯ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ವಿಶ್ವ ತೆಂಗು ದಿನದ ಅಂಗವಾಗಿ ವಿಶೇಷ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು, ಅನ್ನದಾತರ ಪ್ರಸ್ತುತ ಸಂಕಷ್ಟವನ್ನು ಪರ್ತಕರ್ತರಿಗೆ ಮನವರಿಕೆ ಮಾಡುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಧ್ಯಮಗಳು ರೈತರ ದನಿಯಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದರು.
ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪರ್ತಕರ್ತರು ದಿನನಿತ್ಯ ಜೀವನದಲ್ಲಿ ಹಲವು ಹೊಸ ವಿಚಾರಗಳನ್ನು ಕಲಿಯುವ ಅವಕಾಶ ದೊರಯುತ್ತದೆ. ಅದರಂತೆ ಮಾಧ್ಯಮಗಳು ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಮಾಡಬೇಕು. ನಾವು ಮಾಡುವ ಸುದ್ದಿಗಳು ಸಮಾಜದ ಮೇಲೆ, ಯುವ ಮನಸ್ಸುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಂಬ ಸೂಕ್ಷ್ಮತೆ ಪತ್ರಕರ್ತರಾದವರಿಗೆ ಇರಬೇಕು ಎಂದರು.ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಸಕ ಕೆ.ಷಡಕ್ಷರಿ, ನಗರಸಭೆಯ ಅಧ್ಯಕ್ಷೆ ಯಮುನಾ ಧರಣೀಶ್, ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಹೆಚ್ಚುವರಿ ಪ್ರ.ಕಾ ಮದನಗೌಡ, ಎಂ.ವಾಸುದೇವ ಹೊಳ್ಳ, ಶಿವರಾಜು ಆಲ್ಬೂರು, ತಿಪಟೂರು ಕೃಷ್ಣ ಹಲವರು ಇದ್ದರು.