ಸಾರಾಂಶ
ಡೆಂಘೀ ರೋಗದ ಆತಂಕ ಬೇಡ. ಎಲ್ಲರೂ ಅದರಲ್ಲೂ ಸಾರ್ವಜನಿಕರು ಒಗ್ಗಟ್ಟಾಗಿ ನಿಯಂತ್ರಣಕ್ಕೆ ಕೈ ಜೋಡಿಸಿದರೆ ಬಹುಬೇಗ ನಿಯಂತ್ರಣಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಧಾರವಾಡ:
ನಿಯಂತ್ರಣ ಕ್ರಮಗಳಿಂದ ಮಾತ್ರ ಡೆಂಘೀ ರೋಗವು ಹತೋಟಿಗೆ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಜಾಗೃತಿಯೊಂದಿಗೆ ವಾರದ ದಿನ ಶುಕ್ರವಾರ ಸೊಳ್ಳೆ ನಿರ್ಮೂಲನೆ, ಹಾಟ್‌ಸ್ಪಾಟ್ ಕೇಂದ್ರ ಸ್ಥಾಪನೆ, ಬೇವಿನ ಎಣ್ಣೆ ವಿತರಣೆ ಅಂತಹ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಎಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದು ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತಾಲೂಕಿನ ಅಮ್ಮಿನಬಾವಿಯಲ್ಲಿ ಆಯೋಜಿಸಿದ್ದ ವಾರದ ಶುಕ್ರವಾರ ಸೊಳ್ಳೆ ನಿರ್ಮೂಲನೆ ದಿನಾಚರಣೆ ಉದ್ಘಾಟಿಸಿದ ಅವರು, ಡೆಂಘೀ ರೋಗದ ಆತಂಕ ಬೇಡ. ಎಲ್ಲರೂ ಅದರಲ್ಲೂ ಸಾರ್ವಜನಿಕರು ಒಗ್ಗಟ್ಟಾಗಿ ನಿಯಂತ್ರಣಕ್ಕೆ ಕೈ ಜೋಡಿಸಿದರೆ ಬಹುಬೇಗ ನಿಯಂತ್ರಣಕ್ಕೆ ಬರಲಿದೆ ಎಂದರು.ಜು. 25ರ ವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 3500 ಜನರಿಗೆ ಡೆಂಘೀ ಪರೀಕ್ಷೆ ಮಾಡಿದ್ದು ಈ ಪೈಕಿ 521 ಪಾಸಿಟಿವ್ ಪ್ರಕರಣ ಹಾಗೂ ಒಂದು ಬಾಲಕಿ ಮೃತಪಟ್ಟಿದ್ದಾಳೆ. ಜು. 25ರಂದು ನಡೆದ 150 ಜನರ ಪರೀಕ್ಷೆಯಲ್ಲಿ ಏಳು ಮಾತ್ರ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಡೆಂಘೀ ನಿಯಂತ್ರಣಕ್ಕಾಗಿ ಜಿಲ್ಲಾಸ್ಪತ್ರೆ, ಕಿಮ್ಸ್ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೀ ರೋಗಿಗಳಿಗಾಗಿ ಪ್ರತ್ಯೇಕ ಹಾಸಿಗೆ ಕಾಯ್ದಿರಿಸಲಾಗಿದೆ. ಅಗತ್ಯ ಔಷಧಿ ಸಹ ಸಂಗ್ರಹಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಎಲ್ಲರಿಗೂ ಬೇವಿನ ಎಣ್ಣೆ ಸಹ ವಿತರಿಸಿದ್ದು ಒಂದು ವಾರದ ಪರೀಕ್ಷೆಯಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಡೆಂಘೀ ಪ್ರಕರಣ ದಾಖಲಾಗುತ್ತವೆಯೋ ಆ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ ಅಲ್ಲಿ ತಾತ್ಕಾಲಿಕ ಫೀವರ್ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದರಿಂದ ಆ ಪ್ರದೇಶದ ಶಂಕಿತ ಡೆಂಘೀ ಪ್ರಕರಣ ಬೇಗ ಪತ್ತೆ ಹಚ್ಚಿ ನಿಯಂತ್ರಿಸಲು ಸುಲಭ ಆಗಲಿದೆ. ಹಾಟ್‌ಸ್ಪಾಟ್ ಪ್ರದೇಶದಲ್ಲಿ ಬೇವಿನ ಎಣ್ಣೆ ವಿತರಣೆ ಕಾರ್ಯಕ್ರಮ ಸಹ ನಡೆಯುತ್ತಿದೆ ಎಂದರು.ಗ್ರಾಮದ ಶಾಂತೇಶ್ವರ ಪ್ರೌಢಶಾಲೆ ವಿದ್ಯಾರ್ಥಿನೀಯರು ಪ್ರಸ್ತುತಪಡಿಸಿದ ‘ಡೆಂಘೀ ಕುರಿತ ನಾಟಕ ಸಾರ್ವಜನಿಕರ ಗಮನ ಸೆಳೆಯಿತು. ಗ್ರಾಪಂ ಅಧ್ಯಕ್ಷೆ ನೀಲಮ್ಮ ತಿದಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಪಿಡಿಒ ಬಿ.ಡಿ. ಚೆವರಡ್ಡಿ, ಅಂಗನವಾಡಿ ಶಿಕ್ಷಕಿ ಸವಿತಾ ಅಂಗಡಿ ಇದ್ದರು. ಬಳಿಕ ಜಿಲ್ಲಾಧಿಕಾರಿ ಗ್ರಾಮದ ಕೆಲವು ಮನೆಗಳಿಗೆ ತೆರಳಿ ಬೇವಿನ ಎಣ್ಣೆ ನೀಡಿ ಡೆಂಘೀ ಕುರಿತು ಜಾಗೃತಿ ಮೂಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))