ಸಾರಾಂಶ
ಜಿಲ್ಲೆಯಲ್ಲಿ ಉತ್ತಮ ಪ್ರಾಕೃತಿಕ ಸಂಪನ್ಮೂಲಗಳಿವೆ. ಹೆಚ್ಚಿನ ಔಷಧಿಯ ಸಸ್ಯಗಳು ಕೂಡಾ ಇವೆ. ಅಲ್ಲದೆ ಅವುಗಳ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ ಜಿಲ್ಲೆಯಲ್ಲಿದೆ.
ಕಾರವಾರ: ಜಿಲ್ಲೆಯಲ್ಲಿ ಯೋಗ ಮತ್ತು ಆಯುರ್ವೇದ ಪದ್ಧತಿಯನ್ನು ಉತ್ತಮ ರೀತಿಯಲ್ಲಿ ಬೆಳೆಸಲು ವಿಪುಲ ಅವಕಾಶಗಳಿವೆ. ಇದರ ಸಂಪೂರ್ಣ ಸದ್ಬಳಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಉತ್ತಮ ಪ್ರಾಕೃತಿಕ ಸಂಪನ್ಮೂಲಗಳಿವೆ. ಹೆಚ್ಚಿನ ಔಷಧಿಯ ಸಸ್ಯಗಳು ಕೂಡಾ ಇವೆ. ಅಲ್ಲದೆ ಅವುಗಳ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ ಜಿಲ್ಲೆಯಲ್ಲಿದೆ. ಯೋಗ ಪದ್ಧತಿಯನ್ನು ಇನ್ನೂ ಹೆಚ್ಚು ಪ್ರಚುರಪಡಿಸುವ ಮತ್ತು ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೂಳ್ಳುವಂತೆ ತಿಳಿಸಿದ ಅವರು, ಜಿಲ್ಲೆಯ ಎಲ್ಲ ಯೋಗ ತರಬೇತುದಾರರು ಭಾಗವಹಿಸಬೇಕು. ಜೂ. 20ರ ವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಯೋಗೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.ಯೋಗದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಯೋಗದ ಮೂಲಕ ಹಲವು ಮಂದಿ ವಿಶೇಷ ಸಾಧನೆಗಳನ್ನು ಮಾಡಿದ್ದು, ಅವರ ಸಾಧನೆಗಳ ಬಗ್ಗೆ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸುವಂತೆ ಹಾಗೂ ಯೋಗದಿಂದ ರೋಗ ಮುಕ್ತರಾದವರ ಅನಿಸಿಕೆಗಳನ್ನು ತಿಳಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.