ರಸ್ತೆ ಅಗಲೀಕರಣದ ಬಗ್ಗೆ ನ್ಯಾಯಾಲಯಕ್ಕೆ ತೆರಳಿದವರ ಮನವೊಲಿಸಿ: ಭೀಮಣ್ಣ

| Published : Feb 05 2024, 01:52 AM IST

ರಸ್ತೆ ಅಗಲೀಕರಣದ ಬಗ್ಗೆ ನ್ಯಾಯಾಲಯಕ್ಕೆ ತೆರಳಿದವರ ಮನವೊಲಿಸಿ: ಭೀಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯ ಮಾರಿಕಾಂಬಾ ಜಾತ್ರೆ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು, ನ್ಯಾಯಾಲಯಕ್ಕೆ ಹೋದವರ ಮನವೊಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದ್ದಾರೆ.

ಶಿರಸಿ: ನಗರದ ಐದು ರಸ್ತೆ ಸರ್ಕಲ್‌ನಿಂದ ಯಲ್ಲಾಪುರ ನಾಕಾದ ವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಜಾಗ ನೀಡಲು ವಿರೋಧಿಸಿ, ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪೌರಾಯುಕ್ತರು, ತಹಸೀಲ್ದಾರರು ನ್ಯಾಯಾಲಯಕ್ಕೆ ತೆರಳಿದವರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.

ಅವರು ಶನಿವಾರ ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಮಾರಿಕಾಂಬಾ ಜಾತ್ರೆಯ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು ಯತ್ನಿಸಬೇಕು. ಒಂದೊಮ್ಮೆ ಸಾಧ್ಯವಾಗದಿದ್ದಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಡ್ರೈನೇಜ್ ವ್ಯವಸ್ಥೆಗೆ ತೊಂದರೆ ಆಗಿದೆ. ಇದರಿಂದಾಗಿ ಸಾರ್ವಜನಿಕರೂ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಮೊದಲು ಗಮನ ಹರಿಸಬೇಕು ಎಂದರು.

ಲೋಕೋಪಯೋಗಿ ಇಲಾಖೆ ಅಭಿಯಂತರ ಹನುಮಂತ ನಾಯ್ಕ ಮಾಹಿತಿ ನೀಡಿ, ಐದು ರಸ್ತೆ ವೃತ್ತದಿಂದ ರಾಘವೇಂದ್ರ ಮಠ ಸರ್ಕಲ್ ಹಾಗೂ ಅಲ್ಲಿಂದ ಸಾಮ್ರಾಟ್‌ ವರೆಗೆ ಎರಡು ಹಂತದಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ. ಒಟ್ಟೂ ₹15 ಕೋಟಿ ಕಾಮಗಾರಿ ಇದಾಗಿದೆ. ಈಗಾಗಲೇ ರಸ್ತೆ ವಿಸ್ತರಣೆ ಆಗುವ ಜಾಗಕ್ಕೆ ಗಡಿ ಗುರುತು ಹಾಕಿದ್ದೇವೆ. ಆದರೆ, ಮೂವರು ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಡಲು ಸಿದ್ದರಿಲ್ಲದೇ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜೆ.ಆರ್. ಮಾತನಾಡಿ, ರಸ್ತೆ ವಿಸ್ತರಣೆಯ ವೇಳೆ ಅರಣ್ಯ ಇಲಾಖೆಗೆ ಸೇರಿದ ಜಾಗ ಮತ್ತು ಕೆಲವೆಡೆ ಮರಗಳನ್ನೂ ತೆಗೆಯಬೇಕಾಗಿದೆ. ಇಲಾಖೆಯ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರದ ಪರಿವೇಶ್ ತಂತ್ರಾಂಶದಲ್ಲಿ ದಾಖಲೆಗಳನ್ನು ದಾಖಲಿಸಿದ್ದು, ಮೊದಲ ಹಂತದ ಅನುಮತಿ ಸಿಕ್ಕಿದೆ. ಈಗ ಜಾಗದ ಪರಿಹಾರವಾಗಿ ಲೋಕೋಪಯೋಗಿ ಇಲಾಖೆ ಆನ್‌ಲೈನ್ ಮೂಲಕ ಪರಿಹಾರವನ್ನು ಇಲಾಖೆಗೆ ತುಂಬಬೇಕಿದ್ದು, ಪ್ರಕ್ರಿಯೆ ಪೂರ್ಣಗೊಂಡ ತಕ್ಷಣದಲ್ಲಿಯೇ ಮರಗಳನ್ನು ತೆಗೆದು ಜಾಗ ಬಿಟ್ಟುಕೊಡಲು ಅನುಮತಿ ಸಿಗಲಿದೆ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.