ಹಾಸ್ಟೆಲ್‌ ವಿದ್ಯಾರ್ಥಿನಿಯರೊಂದಿಗೆ ಕುಕ್‌ ಭರ್ಜರಿ ಪಾರ್ಟಿ

| Published : Aug 08 2025, 02:00 AM IST

ಸಾರಾಂಶ

ವಸತಿ ನಿಲಯದ ಅಡುಗೆ ತಯಾರಕಿಯೊಬ್ಬಳು (ಕುಕ್) ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ನಿಯಮ ಮೀರಿ ರಾತ್ರಿವೇಳೆ ಹೊರಗಡೆ ಕರೆದುಕೊಂಡು ಹೋಗಿ ಭರ್ಜರಿ ಬರ್ತ್‌ ಡೇ ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸಿರುವ ಘಟನೆ ನಡೆದಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಜೆ ವೇಳೆ ಹಾಸ್ಟೆಲಿನಿಂದ ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸುವಂತಿಲ್ಲ ಎಂಬ ನಿಯಮವಿದ್ದರೂ ವಸತಿ ನಿಲಯದ ಅಡುಗೆ ತಯಾರಕಿಯೊಬ್ಬಳು (ಕುಕ್) ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ನಿಯಮ ಮೀರಿ ರಾತ್ರಿವೇಳೆ ಹೊರಗಡೆ ಕರೆದುಕೊಂಡು ಹೋಗಿ ಭರ್ಜರಿ ಬರ್ತ್‌ ಡೇ ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸಿರುವ ಘಟನೆ ವಿಜಯಪುರ ನಗರದಲ್ಲಿ ಆ.2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಗರದ ಅಥಣಿ ರಸ್ತೆಯ ಮಾರುತಿ ಕಾಲೋನಿಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ಕುಕ್‌ ರಿಜ್ವಾನ್‌ಬೇಗಂ ಮುಲ್ಲಾ ಎಂಬಾಕೆ ತನ್ನ ಹುಟ್ಟುಹಬ್ಬವನ್ನು ಹಾಸ್ಟೆಲ್ ಹುಡುಗಿಯರೊಂದಿಗೆ ಹೋಟೆಲ್ ಒಂದರಲ್ಲಿ ರಾತ್ರಿವೇಳೆ ಸಂಭ್ರಮಿಸಿದ್ದಾಳೆ. ರಾತ್ರಿ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಬಾಲಕಿಯರನ್ನು ಕರೆದೊಯ್ದು ಪಾರ್ಟಿ, ಡ್ಯಾನ್ಸ್ ಮಾಡಿರುವುದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಹಿಂದೆಯೂ ಇಂಡಿಯ ಹಾಸ್ಟೆಲ್‌ನಲ್ಲಿದ್ದಾಗಲೂ ಇದೇ ರೀತಿ ಪಾರ್ಟಿ ಮಾಡಿ ಇದೇ ರಿಜ್ವಾನ್‌ಬೇಗಂ ಮುಲ್ಲಾ ಅಮಾನತಾಗಿದ್ದಳು ಎನ್ನಲಾಗಿದೆ. ಇನ್ನು ಬೇಲಿಯೇ ಎದ್ದು ಹೊಲ ಮೇಯ್ದಂತೆ ವರ್ತಿಸಿದ ಹಾಸ್ಟೆಲ್ ವಾರ್ಡನ್ ಶಕುಂತಲಾ ರಜಪೂತ ಹಾಗೂ ಕುಕ್ ಇದರಲ್ಲಿ ಶಾಮೀಲಾಗಿದ್ದಾರೆ. ರಾತ್ರಿವೇಳೆ ಇಬ್ಬರ ಮೇಲೂ ಕ್ರಮ ಆಗಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ನೋಟಿಸ್ ಜಾರಿ:

ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಕಾಯಂ ಸಿಬ್ಬಂದಿ ರಿಜ್ವಾನ್‌ ಬೇಗಂ ಹಾಗೂ ವಿದ್ಯಾರ್ಥಿಗಳೊಂದಿಗೆ ಬರ್ತಡೇ ಪಾರ್ಟಿಗೆ ತೆರಳಿದ್ದ ವಾರ್ಡನ್‌ ಶಕುಂತಲಾ ರಜಪೂತಗೆ ಕರ್ತವ್ಯ ಲೋಪದ ಹಿನ್ನೆಲೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ವಸತಿ ನಿಲಯಗಳ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರೂ ನೌಕರರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.

ವಸತಿ ನಿಲಯಗಳಲ್ಲಿ ನಮ್ಮ ಮಕ್ಕಳಿಗೆ ಸುರಕ್ಷತೆ ಇರುತ್ತದೆ ಎಂಬ ದೃಷ್ಟಿಯಿಂದ ನಾವೆಲ್ಲ ನಮ್ಮ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಮನೆಯಲ್ಲಿ ಮಲಗಿರುತ್ತೇವೆ. ಆದರೆ ರಕ್ಷಣೆ ಕೊಡಬೇಕಿದ್ದವರೆ ಹೆಣ್ಣುಮಕ್ಕಳನ್ನು ನಿಯಮ ಮೀರಿ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಏನಾದರೂ ಅನಾಹುತಗಳಾಗಿದ್ದರೆ ಯಾರು ಜವಾಬ್ದಾರಿ? ರಾತ್ರಿವೇಳೆ ಅನಧಿಕೃತವಾಗಿ ಬಾಲಕಿಯರನ್ನು ಕರೆದೊಯ್ದವರ ಮೇಲೆ ಕಠಿಣ ಕ್ರಮ ಆಗಬೇಕಿದೆ.

ಹೆಸರು ಹೇಳಲಿಚ್ಛಿಸದ ಪಾಲಕರು

ಅಡುಗೆ ಕಾರ್ಯಕರ್ತೆಯಾಗಿರುವ ರಿಜ್ವಾನಾ ಅವರು ನಾಲ್ಕೈದು ಹುಡುಗಿಯರನ್ನು ಕರೆದುಕೊಂಡು ಹೋಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಚಾರ ನನ್ನ ಗಮನಕ್ಕೂ ಬಂದಿದೆ, ಅವರಿಗೆ ತಿಳವಳಿಕೆ ನೀಡಿದ್ದೇವೆ. ಜೊತೆಗೆ ಎಚ್ಚರಿಕೆ ಕೊಟ್ಟು, ಕಾರಣಕೇಳಿ ನೋಟಿಸ್ ಕೂಡ ನೀಡಲಾಗಿದೆ. ಅವರ ವರ್ತನೆಯಲ್ಲಿ ಬದಲಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಮಹೇಶ ಪೋತದಾರ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ