ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಸಹಕಾರ ನೀಡಿ

| Published : Oct 09 2025, 02:01 AM IST

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಸಹಕಾರ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ, ವಿಶೇಷ ಪರಿಷ್ಕರಣೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಜರುಗಿಸುತ್ತದೆ. ಪಟ್ಟಿಯಲ್ಲಿನ ಅನರ್ಹರ ಹೆಸರು ತೆಗೆಯುವ ಮತ್ತು ಅರ್ಹ ಮತದಾರರ ಹೆಸರು ಸೇರ್ಪಡೆ ಮಾಡಲಾಗುತ್ತದೆ.

ಧಾರವಾಡ:

ಭಾರತ ಚುನಾವಣಾ ಆಯೋಗವು ಶೀಘ್ರದಲ್ಲಿ ಆರಂಭಿಸಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ಕೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನ ಮತ್ತು ನಿಯಮಗಳ ಅನುಸಾರ ತೊಡಗಿಕೊಳ್ಳಲಿದ್ದು ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಈ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿದ ಅವರು, ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ, ವಿಶೇಷ ಪರಿಷ್ಕರಣೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಜರುಗಿಸುತ್ತದೆ. ಪಟ್ಟಿಯಲ್ಲಿನ ಅನರ್ಹರ ಹೆಸರು ತೆಗೆಯುವ ಮತ್ತು ಅರ್ಹ ಮತದಾರರ ಹೆಸರು ಸೇರ್ಪಡೆ ಮಾಡಲಾಗುತ್ತದೆ ಎಂದರು.

ರಾಜ್ಯ ಶಾಸಕಾಂಗ ಮತ್ತು ಸಂಸತ್ತಿಗೆ ನಿಯತಕಾಲಿಕವಾಗಿ ಚುನಾವಣೆ ನಡೆಸಲು ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೊಸ ಮತದಾರರ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದಾಗಲೆಲ್ಲ, ಹಿಂದಿನ ಮತದಾರರ ಪಟ್ಟಿಗಳು ನಿಷ್ಕ್ರಿಯವಾಗುತ್ತವೆ ಮತ್ತು ಹೊಸದು ಮಾತ್ರ ಜಾರಿಯಲ್ಲಿರುತ್ತದೆ. ಹಿಂದಿನ ಮತದಾರರ ಪಟ್ಟಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪ್ರತಿ ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಮನೆ-ಮನೆ ಭೇಟಿ ಮೂಲಕ ಮತಗಟ್ಟೆ ಮಟ್ಟದ ಅಧಿಕಾರಿಗಳು ಪರಿಷ್ಕರಿಸಲಿದ್ದಾರೆ. ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದಲ್ಲಿ ನೇಮಿಸುವ ಬಿಎಲ್‌ಎಗಳು ಸಹಕಾರ ನೀಡಬೇಕು. ಇದರಿಂದ ಮತ್ತಷ್ಟು ಪಾರದರ್ಶಕವಾಗಿ ಕಾರ್ಯವಾಗುತ್ತದೆ ಎಂದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿದ್ದು ಕಲ್ಯಾಣಶೆಟ್ಟಿ, ನಾಗಪ್ಪ ಸುತಗಟ್ಟಿ, ಪ್ರಕಾಶ ಹಳಿಯಾಳ, ಗುರುರಾಜ ಹುಣಸಿಮರದ, ದೇವರಾಜ ಕಂಬಳಿ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿದ್ದರು.