ಗದಗ: ಬಾಲ್ಯವಿವಾಹ ತಡೆಗಟ್ಟಲು ಕೇವಲ ಕಾನೂನು ಕ್ರಮಗಳಷ್ಟೇ ಸಾಲದು, ಸಮಾಜದ ಪ್ರತಿಯೊಬ್ಬರ ಸಕ್ರಿಯ ಸಹಭಾಗಿತ್ವ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಪೊಕ್ಸೋ ಕಾಯ್ದೆ-2012ರ ಕುರಿತು ಭಾಗಿದಾರ ಇಲಾಖೆ ಅಧಿಕಾರಿಗಳು ಹಾಗೂ ಸಾಮೂಹಿಕ ವಿವಾಹ ಆಯೋಜಕರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗದಗ ಜಿಲ್ಲೆಯು ಬಾಲ್ಯ ವಿವಾಹದಲ್ಲಿ 6ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣಗಳು ಕಡಿಮೆ ಇದೆ. ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಪೊಕ್ಸೋ ಕಾಯ್ದೆ-2012ರ ಕುರಿತು ಭಾಗಿದಾರ ಇಲಾಖೆ ಅಧಿಕಾರಿಗಳು ಸಾಮೂಹಿಕ ವಿವಾಹ ಆಯೋಜಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಿರಿ, ಈ ಕಾಯ್ದೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಮುಂದೆ ಬಾಲ್ಯವಿವಾಹಗಳು ಕಂಡು ಬಂದಲ್ಲಿ ಪ್ರಕರಣ ದಾಖಲಿಸುತ್ತಾರೆ. ನನಗೆ ಈ ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವಂತಿಲ್ಲ, ಬಾಲ್ಯವಿವಾಹದಲ್ಲಿ ಭಾಗಿಯಾದ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಪ್ರಕರಣಗಳಲ್ಲಿ ₹2 ಲಕ್ಷ ದಂಡ, 2 ವರ್ಷ ಜೈಲು ಶಿಕ್ಷೆ ಇದೆ. ಆದ್ದರಿಂದ ಬಾಲ್ಯವಿವಾಹವನ್ನು ತಡೆಯಬೇಕು ಮತ್ತು ಸಾರ್ವಜನಿಕರು ಬಾಲ್ಯವಿವಾಹ ಎಂದು ತಿಳಿದ ತಕ್ಷಣ ಮಕ್ಕಳ ಸಹಾಯವಾಣಿಗೆ 1098ಗೆ ಕರೆ ಮಾಡಬೇಕು ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರು ಮಾತನಾಡಿ, ಬಾಲ್ಯವಿವಾಹ ಪ್ರಕರಣಗಳು ಸಾಕಷ್ಟು ಸಮಿತಿ ಮುಂದೆ ಬರುತ್ತಿವೆ. ವಿವಿಧ ಕಾರಣಗಳಿಂದ ಬಾಲ್ಯವಿವಾಹ ಮಾಡುತ್ತಿದ್ದು ಇದು ಕಡಿಮೆಯಾಗಬೇಕು. ಸಾಮೂಹಿಕ ವಿವಾಹ ಆಯೋಜಕರು ಹಾಗೂ ಭಾಗಿದಾರ ಇಲಾಖೆಯ ಇಲ್ಲಿ ಭಾಗವಹಿಸಿದ್ದು, ವಯಸ್ಸಿನ ದೃಢೀಕರಣಕ್ಕೆ ಆಧಾರ್ ಕಾರ್ಡ್, ಶಾಲಾ ದೃಢೀಕರಣ ತೆಗೆದುಕೊಳ್ಳಬೇಕು. ಬಾಲ್ಯವಿವಾಹ ಕದ್ದು-ಮುಚ್ಚಿ ಮಾಡಿದರೆ ಮುಂದೆ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾದಾಗ ಪೊಕ್ಸೋ ಪ್ರಕರಣ ದಾಖಲಾಗುತ್ತದೆ. ಭಾಗಿದಾರರ ಇಲಾಖೆ, ಸಾಮೂಹಿಕ ಆಯೋಜಕರು, ಮುದ್ರಣಕಾರರು, ಟ್ರಸ್ಟ್‌ಗಳು ಈ ಕುರಿತು ಗಮನಹರಿಸಿ ಎಲ್ಲರು ಬಾಲ್ಯವಿವಾಹದಿಂದ ಮಕ್ಕಳನ್ನು ರಕ್ಷಿಸೋಣ ಎಂದರು.ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಉಪನ್ಯಾಸ ನೀಡಿದರು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಬಾಲ್ಯವಿವಾಹ ನಿಷೇಧ ಕುರಿತು ಕಿರು ನಾಟಕ ಪ್ರದರ್ಶಿಸಿದರು.ಈ ವೇಳೆ ಶೋಭಾ ಉಮಚಗಿ, ಸುಪರ್ಣ ಬ್ಯಾಹಟ್ಟಿ, ಮಂಜುನಾಥ ನಡುವಿನಮನಿ, ಎಚ್.ಡಿ. ಓದುಗೌಡರ, ಶ್ರೀಶೈಲ್ ಸೋಮನಕಟ್ಟಿ, ವಿ.ಸುಶೀಲಾ, ಸ್ಪಂದನಾ ಸೇರಿದಂತೆ ಇತರರು ಇದ್ದರು. ರಫೀಕಾ ಹಳ್ಳೂರು ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು. ರಮೇಶ ಕಳ್ಳಿಮನಿ ವಂದಿಸಿದರು.