ಮಂಗನ ಕಾಯಿಲೆ ಮುಕ್ತ ತಾಲೂಕಿಗೆ ಸಹಕಾರ ಅಗತ್ಯ: ಡಾ.ಆಕರ್ಷ

| Published : Feb 23 2025, 12:32 AM IST

ಸಾರಾಂಶ

ನರಸಿಂಹರಾಜಪುರಎಲ್ಲರೂ ಕೈಜೋಡಿಸಿ ಮಂಗನ ಕಾಯಿಲೆ ಮುಕ್ತ ತಾಲೂಕು ನಿರ್ಮಾಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಡಾ.ಆಕರ್ಷ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎಲ್ಲರೂ ಕೈಜೋಡಿಸಿ ಮಂಗನ ಕಾಯಿಲೆ ಮುಕ್ತ ತಾಲೂಕು ನಿರ್ಮಾಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಡಾ.ಆಕರ್ಷ ಮನವಿ ಮಾಡಿದರು.

ಶುಕ್ರವಾರ ತಾಲೂಕಿನ ಶಿಗುವಾನಿ ಸಮುದಾಯ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಾಂತಿ ಜ್ಞಾನ ವಿಕಾಸ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಎನ್.ಆರ್.ಪುರ ತಾಲೂಕಿನಲ್ಲಿ 14 ಮಂಗನ ಕಾಯಿಲೆ ಪ್ರಕರಣಗಳು ಕಂಡು ಬಂದಿದ್ದು 14 ಜನರೂ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ. ಮಂಗನ ಕಾಯಿಲೆ ಒಂದು ವೈರಸ್ ನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಲಕ್ಷಣ ಆಧಾರಿತ ಚಿಕಿತ್ಸೆಯನ್ನು ಮಾತ್ರ ನೀಡಲಾಗುತ್ತದೆ. ಕಾಯಿಲೆ ನಿರ್ಲಕ್ಷಿಸಿದರೆ ಅಪಾಯ ಹೆಚ್ಚು. ಇದು ಸೋಂಕಿತ ಉಣುಗು ಮನುಷ್ಯನಿಗೆ ಕಚ್ಚುವುದರಿಂದ, ಮನುಷ್ಯನಲ್ಲಿ ಕಂಡುಬರುತ್ತದೆ. ಈ ಕಾಯಿಲೆ ಪ್ರಮುಖ ಲಕ್ಷಣಗಳು ಜ್ವರ, ವಾಂತಿ, ಮೈ ಕೈ ನೋವು, ಸುಸ್ತು ಹಸಿವಾಗದೆ ಇರುವುದು ವಸಡು ಮತ್ತು ಮಲದಲ್ಲಿ ರಕ್ತಸ್ರಾವ ಕಂಡುಬರುವುದು ಆಗಿದೆ. ಈ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪ್ಪದೇ ರಕ್ತ ಪರಿಶೀಲನೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಮಾಹಿತಿ ನೀಡಿ, ಸರ್ಕಾರ ರಾಜ್ಯದ ಜನ ಆರೋಗ್ಯವಾಗಿ ಇರಬೇಕೆಂದು ಹಲವಾರು ಕಾರ್ಯಕ್ರಮಗಳನ್ನ ಇಲಾಖೆಯಿಂದ ಸಾರ್ವಜನಿಕರಿಗೆ ಒದಗಿಸುತ್ತಿದೆ. ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಮಾಹಿತಿ ತಲುಪಲು ಎಲ್ಲ ಸಂಘ ಸಂಸ್ಥೆಗಳ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಆರೋಗ್ಯದ ಕುರಿತು ಮಾಹಿತಿ ಪಡೆದು ತಮ್ಮ ಕುಟುಂಬದ ಎಲ್ಲ ಸದಸ್ಯರ ಹಾಗೂ ಗ್ರಾಮದ ಆರೋಗ್ಯ ಕಾಪಾಡುವಲ್ಲಿ ಸಹಕರಿಬೇಕು ಎಂದರು. ತಾಲೂಕು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ಕರ್ ಮಾತನಾಡಿ, ಕ್ಷಯ ರೋಗ ಒಂದು ಸಾಂಕ್ರಾಮಿಕ ರೋಗ. ಮೈಕ್ರೋ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯೂಲೆಯ್ ಎಂಬ ರೋಗಾಣುವಿನಿಂದ ಈ ಕಾಯಿಲೆ ಉಂಟಾಗುತ್ತದೆ. ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ವಿಚಕ್ಷಣ ಅಧಿಕಾರಿ ಪ್ರದೀಪ್, ಅಧ್ಯಕ್ಷತೆಯನ್ನು ಗಂಗಮ್ಮ ವಹಿಸಿದ್ದರು. ಸೇವಾ ಪ್ರತಿನಿಧಿ ಅಶ್ವಿನಿ, ಶಾಂತಿ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪ್ರತಿಮಾ, ಜ್ಞಾನ ವಿಕಾಸ ಕೇಂದ್ರದ ಕೊಪ್ಪ ಹಾಗೂ ಎನ್‌.ಆರ್.ಪುರ ತಾಲೂಕು ಸಮನ್ವಯಾಧಿಕಾರಿ ಉಷಾ, ಶಾಂತಿ ಜ್ಞಾನ ವಿಕಾಸ ಕೇಂದ್ರದ ಸರ್ವ ಸದಸ್ಯರು ಉಪಸ್ಥಿತರಿದ್ದರು.