ಹಾಲಕ್ಕಿ ಯುವಜನರ ಪ್ರಗತಿಗೆ ಸಹಕಾರ ಅಗತ್ಯ: ಗೋಪಾಲಕೃಷ್ಣ ನಾಯಕ

| Published : May 15 2024, 01:31 AM IST

ಹಾಲಕ್ಕಿ ಯುವಜನರ ಪ್ರಗತಿಗೆ ಸಹಕಾರ ಅಗತ್ಯ: ಗೋಪಾಲಕೃಷ್ಣ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಅಂಕೋಲಾದ ಜೈಹಿಂದ್ ಮೈದಾನದಲ್ಲಿ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಯುವಕರಿಗಾಗಿ ಮೊದಲ ಬಾರಿಗೆ ಆಯೋಜಸಿದ್ದ ‘ಹಾಲಕ್ಕಿ ಪ್ರೀಮಿಯರ್ ಲೀಗ್- 2024’ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಅಂಕೋಲಾ: ಹಾಲಕ್ಕಿ ಯುವ ಜನರ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಉದ್ಯೋಗ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಎಲ್ಲರ ಸಹಕಾರದೊಂದಿಗೆ ತಾವೂ ಶ್ರಮಿಸುವುದಾಗಿ ಅಂಕೋಲಾ ಫೌಂಡೇಶನ್‌ನ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ತಿಳಿಸಿದರು.

ಪಟ್ಟಣದ ಜೈಹಿಂದ್ ಮೈದಾನದಲ್ಲಿ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಯುವಕರಿಗಾಗಿ ಮೊದಲ ಬಾರಿಗೆ ಆಯೋಜಸಿದ್ದ ‘ಹಾಲಕ್ಕಿ ಪ್ರೀಮಿಯರ್ ಲೀಗ್- 2024’ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆನುವಂಶೀಯ ಪ್ರಧಾನ ಅರ್ಚಕ ಹಾಗೂ ಉಪಾಧಿವಂತ ಅರ್ಚಕರ ಸಂಘದ ಅಧ್ಯಕ್ಷ ರಾಜಗೋಪಾಲ ಅಡಿ ಮಾತನಾಡಿ, ಕರ್ನಾಟಕ ಇತಿಹಾಸದಲ್ಲಿ ಸುವರ್ಣ ಯುಗವನ್ನೇ ನಿರ್ಮಿಸಿದ ವಿನಜಯನಗರ ಸಾಮ್ರಾಜ್ಯ ಕಾಲದಲ್ಲಿ ಅಂಕೋಲಾ ಮತ್ತು ಸುತ್ತಮುತ್ತಲ ವಿಶಾಲ ಭೂಪ್ರದೇಶವು ಅಂಕೋಲೆ ನಾಡು ಎಂದು ಪ್ರಸಿದ್ಧವಾಗಿತ್ತು. ಈ ಬಗ್ಗೆ ಬೆಳಂಬಾರ ಗ್ರಾಮದಲ್ಲಿ ದೊರಕಿರುವ 14ನೇ ಶತಮಾನದ ಶಿಲಾಶಾಸನದಲ್ಲಿ ಅಂಕೋಲೆ ನಾಡು ಎಂದೇ ಉಲ್ಲೇಖಿಸಲಾಗಿದೆ ಎಂದರು.

ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾದೇವ ಗೌಡ, ಹರೀಶ ಗೌಡ, ನಿಸರ್ಗ ಸೇವಾ ಸಂಸ್ಥೆಯ ವ್ಯವಸ್ಥಾಪಕ ಅಶೋಕ ಟಿ. ಗೌಡ ಮಾತನಾಡಿದರು. ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ಪ್ರಾಯೋಜಕತ್ವ ವಹಿಸಿದ್ದ ಗೋಪಾಲಕೃಷ್ಣ ನಾಯಕ ಮತ್ತು ರಾಜಗೋಪಾಲ ಅಡಿ ಅವರನ್ನು ಗೌರವಿಸಲಾಯಿತು. ಶೇಖರ ಗೌಡ ಸ್ವಾಗತಿಸಿದರು.

ಚಾಂಪಿಯನ್‌ ಪ್ರಶಸ್ತಿ: ರಾಜ್ ಇಲೆವೆನ್ ಅಂಕೋಲಾ ತಂಡವು ಚಾಂಪಿಯನ್ ಪ್ರಶಸ್ತಿ ಹಾಗೂ ರಿವೇಂಜ್ ಕ್ರಿಕೆಟರ್ಸ್ ಬಾಯ್ಸ್ ಅಂಕೋಲಾ ತಂಡವು ರನ್ನರ್‌ಆಪ್ ಪ್ರಶಸ್ತಿ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದವು.