ಐತಿಹಾಸಿಕ ಹಿನ್ನೆಲೆ ಹೊಂದಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅವಕಾಶ ಕಲ್ಪಿಸಿದ್ದು, ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಹೇಳಿದರು.
ಮಡಿಕೇರಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅವಕಾಶ ಕಲ್ಪಿಸಿದ್ದು, ಕಾಲೇಜಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಹೇಳಿದರು.
ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಲೇಜಿನ 77ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು 77 ವಸಂತ ಪೂರೈಸಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಹಲವಾರು ಇತಿಮಿತಿಗಳ ನಡುವೆಯೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.ಪತ್ರಕರ್ತ ಎಚ್.ಜೆ.ರಾಕೇಶ್ ಮಾತನಾಡಿ, ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು 200 ನೇ ವಾರ್ಷಿಕೋತ್ಸವವನ್ನು ಆಚರಿಸುವಂತಾಗಲಿ ಎಂದು ಶುಭಹಾರೈಸಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಪತ್ರಕರ್ತ ಜಿ.ವಿ.ರವಿಕುಮಾರ್ ಮಾತನಾಡಿ ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಪ್ರಗತಿಗೆ ಯುವ ಸಮೂಹವೇ ಬೆನ್ನೆಲುಬು. ಯುವ ಶಕ್ತಿ ಮನಸ್ಸು ಮಾಡಿದರೆ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುವ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ 1949ರಲ್ಲಿ ಆರಂಭವಾದ ಕಾಲೇಜಿನಲ್ಲಿ ರಾಜಕೀಯ, ಸೇನೆ, ಪೊಲೀಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಪ್ರಸ್ತುತವು ಹಲವಾರು ಸಾಧಕರಿದ್ದಾರೆ ಎಂದು ಹೇಳಿದರು.ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ, ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಅಳಿಲು ಸೇವೆ ಮಾಡುವ ಮೂಲಕ ಜೀವನವನ್ನು ಸಾರ್ಥಪಡಿಸಿಕೊಳ್ಳಬೇಕು ಎಂದು ಹೇಳಿದರು.ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಸಿ.ಜಿ.ವಿನಾಯಕ್ ಶುಭಹಾರೈಸಿದರು.
ಕೊಡಗು ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಮೇಚಿರ ರವಿಶಂಕರ್, ಐಕ್ಯೂಎಸಿ ಸಂಚಾಲಕ ಪ್ರೊ.ಕೆ.ಪಿ.ನಾಗರಾಜ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕೆ.ಟಿ.ವರ್ಷ, ಕೆ.ಡಿ.ಇಂಪನಾ, ನಿಲಿಷಾ ಜೋಜೋ, ಬಿ.ಎಂ.ವಂದನಾ, ಎಸ್.ಶ್ರೀನಂದ, ಎನ್‌ಸಿಸಿ ನಾಯಕರಾದ ಕೆ.ಎಂ.ತಿಮ್ಮಯ್ಯ, ಬಿ.ಎಲ್.ಚರಿಷ್ಮಾ ರೈ, ಅಧ್ಯಾಪಕರು ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು. ಎಸ್. ಶ್ರೀನಂದ್, ಹೆಚ್.ಆರ್.ಸಂದೇಶ್ ನಿರೂಪಿಸಿದರು, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೊ.ಶ್ರೀಧರ್ ಹೆಗಡೆ ಸ್ವಾಗತಿಸಿದರು, ಪ್ರೊ.ಅಲೋಕ್ ಕಾಲೇಜಿನ ಶೈಕ್ಷಣಿಕ ವರದಿ ವಾಚಿಸಿದರು, ಕೆ.ಟಿ.ವರ್ಷ ವಂದಿಸಿದರು.ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.