ಎಲ್ಲ ಶಿಕ್ಷಕರ ಶ್ರಮದ ಫಲವಾಗಿ ಇಂದು ನಾವು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಕಾರಣವಾಗಿದೆ. ಹಾಗಾಗಿ ನನಗೆ ಸರಕಾರ ಕೊಟ್ಟ ಸರ್ವೋತ್ತಮ ಸೇವಾ ಪ್ರಶಸ್ತಿ ತಾಲೂಕಿನ ಎಲ್ಲ ಶಿಕ್ಷಕ ಬಂಧುಗಳ ಶ್ರಮದ ಫಲವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಶಿಗ್ಗಾಂವಿ: ಎಲ್ಲ ಶಿಕ್ಷಕರ ಶ್ರಮದ ಫಲವಾಗಿ ಇಂದು ನಾವು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಕಾರಣವಾಗಿದೆ. ಹಾಗಾಗಿ ನನಗೆ ಸರಕಾರ ಕೊಟ್ಟ ಸರ್ವೋತ್ತಮ ಸೇವಾ ಪ್ರಶಸ್ತಿ ತಾಲೂಕಿನ ಎಲ್ಲ ಶಿಕ್ಷಕ ಬಂಧುಗಳ ಶ್ರಮದ ಫಲವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ತಾಲೂಕಿನ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆ ವತಿಯಿಂದ ನಗರದ ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಬಿ. ಅಂಬಿಗೇರ ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಸಿಕ್ಕಿದ್ದಕ್ಕಾಗಿ ಹಾಗೂ ಎಸ್.ಎಸ್. ಎಲ್.ಸಿ. ಫಲಿತಾಂಶದಲ್ಲಿ ಶಿಗ್ಗಾಂವಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂದರು.

ನಮ್ಮ ಶಿಕ್ಷಕ ಬಂಧುಗಳು ಇಂದು ಸರ್ಕಾರದ ಯಾವುದೇ ಕೆಲಸ ಇದ್ದರು ಸಹ ಅತ್ಯಂತ ಶ್ರದ್ಧೆ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತ ಬಂದಿದ್ದಾರೆ. ಜನಗಣತಿ, ಮನೆಗಣತಿ ಹಾಗೂ ಇತ್ತೀಚಿಗೆ ನಡೆಯುತ್ತಿರುವ ಎಸ್‌ಐಆರ್ ಕಾರ್ಯದಲ್ಲಿ ಶಿಕ್ಷಕರು ಉತ್ತಮ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ನಮ್ಮ ತಾಲೂಕು ಸರ್ಕಾರ ನೀಡಿದ ಎಲ್ಲ ಕಾರ್ಯದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಎಲ್ಲ ಕೆಲಸದ ಪ್ರಗತಿ ಹಾಗೂ ಯಶಸ್ಸಿನ ಹಿನ್ನೆಲೆಯಲ್ಲಿ ಸರ್ಕಾರ ನನಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಲು ತಾಲೂಕಿನ ಎಲ್ಲ ಸಂಘ ಸಂಸ್ಥೆ ಜನಪ್ರತಿನಿಧಿಗಳ ಹಾಗೂ ಪಾಲಕರ ಸಹಕಾರ ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ ವತಿಯಿಂದ ನನಗೆ ಪ್ರೀತಿಯಿಂದ ಮಾಡಿದ ಸನ್ಮಾನ ಪುಟ್ಟರಾಜ ಗುರುಗಳ ಆಶೀರ್ವಾದ ಅಂತ ನಾನು ಭಾವಿಸಿಕೊಂಡಿದ್ದೇನೆ. ಇನ್ನಷ್ಟು ಕೆಲಸ ಮಾಡಲು ಅಜ್ಜನವರ ಆಶೀರ್ವಾದ ನನ್ನ ಮೇಲಿರಲಿ ಎಂದರು. ಸಂಸ್ಥೆ ಅಧ್ಯಕ್ಷ ಫಕ್ಕೀರೇಶ ಕೊಂಡಾಯಿ ಮಾತನಾಡಿ, ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಂಬಿಗೇರ ಅವರು ಶಿಕ್ಷಕರಿಗೆ, ಮಕ್ಕಳಿಗೆ ಪ್ರೇರೇಪಣೆ ನೀಡಿ ನಮ್ಮ ತಾಲೂಕಿನ ಶೈಕ್ಷಣಿಕ ಪ್ರಗತಿ ಸಾಧಿಸಲು ಶ್ರಮ ವಹಿಸಿದ್ದಾರೆ. ಜೊತೆಗೆ ಶಿಕ್ಷಕರು ಹಾಗೂ ತಾಲೂಕಿನ ಎಲ್ಲ ಸಾರ್ವಜನಿಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಅಧಿಕಾರಿಗಳಾಗಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಲ್ಲಿ ಅದರಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಅದಕ್ಕೆ ಉದಾಹರಣೆ ನಮ್ಮ ಎಂ.ಬಿ. ಅಂಬಿಗೇರ ಗುರುಗಳು ಅವರಿಗೆ ಇನ್ನೂ ಹೆಚ್ಚಿನ ಹುದ್ದೆಗಳು ದೊರೆತು ಇನ್ನೂ ಹೆಚ್ಚು ಕೆಲಸ ಮಾಡುವ ಅವಕಾಶ ದೊರೆಯಲಿ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಧ್ಯಕ್ಷರಾದ ಕೊಟ್ರೇಶ್ ಮಾಸ್ತರ ಬೆಳಗಲಿ, ಕಾರ್ಯದರ್ಶಿ ಶಿವಾನಂದ ಹೊಸಮನಿ, ನಿರ್ದೇಶಕರಾದ ರಮೇಶ್ ಸಾತಣ್ಣವರ, ಬಸವರಾಜ ಶಿಗ್ಗಾಂವಿ, ಮಲ್ಲಿಕಾರ್ಜುನ ಗೊಬ್ಬರಗುಂಪಿ, ಡಾ. ಶರೀಫ ಮಾಕಪ್ಪನವರ, ಬಿ.ಎಚ್. ಚಲವಾದಿ, ಎಸ್.ಕೆ. ಹೂಗಾರ್, ಎಸ್.ಎನ್. ಮುಗಳಿ, ಸಿ.ಡಿ. ಯತ್ನಳ್ಳಿ, ಬಿ. ಡಿ. ಪಾಟೀಲ, ಪಿ.ವಿ. ತೆಂಬದಮನಿ, ಡಿ.ಎಸ್. ಓಲೇಕಾರ, ರಾಮಣ್ಣ ಗ್ಯಾನಪ್ಪನವರ, ಸುರೇಶ ಯಲಿಗಾರ ಹಾಗೂ ಇತರರು ಹಾಜರಿದ್ದರು.