ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಯಕ್ಷಗಾನ ಪರಂಪರೆಯ ಉಳಿವು, ಬೆಳವಣಿಗೆಗೆ ಧಾರ್ಮಿಕ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.ಅವರು ಗುರುವಾರ ಭಟ್ಕಳ ಕರಿಕಲ್ಲಿನ ಧ್ಯಾನ ಮಂದಿರದಲ್ಲಿ ನಡೆದ ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಶ್ರೀರಾಮ ಕಾರುಣ್ಯ ಕಲಾ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಗಳ ಚಾತುರ್ಮಾಸ್ಯದಂತಹ ಪವಿತ್ರ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಅಲ್ಲದೆ ಸಾಧಕ ಕಲಾವಿದರನ್ನು ಸಪತ್ನೀಕರಾಗಿ ಸನ್ಮಾನಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯ. ಕಲಾವಿದನ ಕಲಾವೃತ್ತಿಯ ಯಶಸ್ಸಿನ ಹಿಂದೆ ಆತನ ಧರ್ಮ ಪತ್ನಿಯ ಸಹಕಾರ, ತ್ಯಾಗವಿರುತ್ತದೆ. ಅವಳಿಗೂ ಪತಿಯೊಂದಿಗೆ ಗೌರವಿಸುವ ಪರಿಪಾಠ ಕಲಾ ಸೇವೆಗೆ ಸಂದ ಗೌರವವಾಗಿದೆ ಎಂದರು.ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಹಿಂದೆ ಋಷಿಮುನಿಗಳು ಒದಗಿಸಿದ ಧರ್ಮ ಆಚರಣೆಯ ಕೈಂಕರ್ಯವನ್ನು ಇಂದು ಯಕ್ಷಗಾನ ನೀಡುತ್ತಿದೆ. ಚಾತುರ್ಮಾಸ್ಯದ 50 ದಿನಗಳಲ್ಲಿ 50 ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವ ಚಿಂತನೆ ನಡೆಸಿದ್ದೇವೆ. ನಕಾರಾತ್ಮಕ ಚಿಂತನೆಯಿಂದ ಮನಸನ್ನು ಹೊರ ತರುವ, ಮನಸ್ಸನ್ನು ಜಾಗೃತಗೊಳಿಸುವ ಶಕ್ತಿ ಯಕ್ಷಗಾನಕ್ಕಿದೆ ಎಂದು ತಿಳಿಸಿದರು.
ಈ ಸಂದರ್ಭ ಖ್ಯಾತ ಯಕ್ಷಗಾನ ಸಂಘಟಕ ಬಿ. ಜನಾರ್ದನ ಅಮ್ಮುಂಜೆ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ಪಂಜ ಗುಡ್ಡಪ್ಪ ಸುವರ್ಣ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀರಾಮ ಕಾರುಣ್ಯ ಕಲಾ ಸಂಘದ ಸಂಚಾಲಕ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ. ಬೆಳಾಲ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ್ ಭಟ್ಕಳ, ಉದ್ಯಮಿ ವಿಠಲ ನಾಯ್ಕ, ಶ್ರೀಗಳ ಶಿಷ್ಯ ಎಂ.ಎಸ್. ನಾಯ್ಕ್, ಪ್ರಸಿದ್ಧ ಭಾಗವಾತ ಗಿರೀಶ್ ರೈ ಕಕ್ಕೆಪದವು ಉಪಸ್ಥಿತರಿದ್ದರು.
ದೇವುದಾಸ್ ಮಾಸ್ಟರ್ ಕಾರ್ಕಳ ಹಾಗೂ ರಮೇಶ್ ಕುಲಶೇಖರ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಪಿ. ಬೆಳಲ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನ ನಡೆಯಿತು.