ಹಾರೋಹಳ್ಳಿಯಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ

| Published : Aug 11 2024, 01:35 AM IST

ಸಾರಾಂಶ

ಕುರಿ, ಮೇಕೆ ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ಹಾರೋಹಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

-ಹಾರೋಹಳ್ಳಿ ತಾಲೂಕಿನ ಮರಸರಹಳ್ಳಿ ಸುತ್ತಮುತ್ತ 15 ದಿನದಿಂದ ಆತಂಕ ಸೃಷ್ಟಿಸಿದ್ದ ಚಿರತೆಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಕುರಿ, ಮೇಕೆ ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

ತಾಲೂಕಿನ ಮರಳವಾಡಿ ಹೋಬಳಿ ಮರಸರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಮರಸನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಶನಿವಾರ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ 15 ದಿನಗಳಿಂದ ಜುಟ್ಟೇಗೌಡನ ವಲಸೆ ಬನವಾಸಿ ಮರಸನಹಳ್ಳಿ ಮರಳವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲಗ್ಗೆ ಇಡುತ್ತಿದ್ದ ಚಿರತೆ, ಸಾಕು ಪ್ರಾಣಿ ಮತ್ತು ಬೀದಿ ನಾಯಿಗಳ ಮೇಲೆ ದಾಳಿ ಮಾಡಿ ಎಳೆದೊಯ್ಯುತ್ತಿತ್ತು. ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿತ್ತು.

ಗ್ರಾಮದ ಸುತ್ತಮುತ್ತಲು ಚಿರತೆ ಹಾವಳಿ ಹೆಚ್ಚಾಗಿದ್ದು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಗ್ರಾಮಸ್ತರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದರು. ಮರಸನಹಳ್ಳಿ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಆಯಕಟ್ಟಿನ ಜಾಗದಲ್ಲಿ ಬೋನನ್ನು ಇರಿಸಿದ್ದರು. ಕಳೆದ ರಾತ್ರಿ ಆಹಾರ ಅರಸಿ ಬಂದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ.

ಮರಳವಾಡಿ ಜುಟ್ಟೆ ಗೌಡನ ದೊಡ್ಡಿ ಮರಸರಹಳ್ಳಿ ಬನವಾಸಿ ಮರಳವಾಡಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಮೂರರಿಂದ ನಾಲ್ಕು ಚಿರತೆಗಳು ಬೀಡು ಬಿಟ್ಟಿವೆ. ಈಗ ಮರಿ ಚಿರತೆ ಮಾತ್ರ ಬೋನಿನಲ್ಲಿ ಸೆರೆಯಾಗಿದೆ. ಉಳಿದ ಎರಡು ಚಿರತೆಗಳನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.