ಕನ್ನಡಪ್ರಭ ವಾರ್ತೆ ಹಿರಿಯೂರು
ಗಡಿನಾಡ ಕುಂಚಿಟಿಗರನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಕರ್ನಾಟಕ-ಆಂಧ್ರ ಗಡಿ ಗ್ರಾಮವಾದ ವಿ.ಅಗ್ರಹಾರದಲ್ಲಿ ಶನಿವಾರ ಆಯೋಜಿಸಿದ್ದ ಗಡಿನಾಡ ಕುಂಚಿಟಿಗ ಒಕ್ಕಲಿಗರ ಸಮಾವೇಶ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಂಧ್ರಪ್ರದೇಶದ ಶಾಸನ ಸಭೆಯಲ್ಲಿ ಕುಂಚಿಟಿಗರ ಒಬಿಸಿ ಮೀಸಲಾತಿಗೆ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಕೇಂದ್ರ ಸರ್ಕಾರದ ಸಚಿವರ ಮೇಲೆ ಒತ್ತಡ ಹಾಕಿ ಮೀಸಲಾತಿ ಜಾರಿಗೆ ಪ್ರಯತ್ನ ಮಾಡಲಾಗುವುದು. ಇಂದಿನ ಯುವಜನತೆ ಕೆಂಪೇಗೌಡರ ಆದರ್ಶ, ಒಕ್ಕಲಿಗರ ಸಂಸ್ಕೃತಿ ಪರಂಪರೆ ಬಗ್ಗೆ ತಿಳಿದರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಆಧುನಿಕ ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರು ನೀಡಿದ ಕೊಡುಗೆ ಸ್ಮರಣೀಯ ಎಂದರು.ಆಂಧ್ರ ಶಾಸಕ ಎಂ.ಎಸ್.ರಾಜು ಮಾತನಾಡಿ, ಕೆಂಪೇಗೌಡರು ಒಕ್ಕಲಿಗರ ಆತ್ಮ ಗೌರವದ ಪ್ರತೀಕವಾಗಿದ್ದು ಬೆಂಗಳೂರನ್ನು ಭವಿಷ್ಯದ ನಗರವನ್ನಾಗಿ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗಡಿನಾಡ ಕುಂಚಿಟಿಗ-ಒಕ್ಕಲಿಗರು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಂಘಟಿತವಾಗಬೇಕು. ಕೆಂಪೇಗೌಡರು ಈ ಶತಮಾನದ ಯುಗಪುರುಷ ಎಂದು ಬಣ್ಣಿಸಿದರು.
ಎಂಎಲ್‌ಸಿ ಚಿದಾನಂದ ಗೌಡ ಮಾತನಾಡಿ, ಕೆಂಪೇಗೌಡರು ಜಾತ್ಯತೀತ ನಾಯಕನಾಗಿ ಜನ ಮೆಚ್ಚುವಂತ ಆಡಳಿತ ನಡೆಸಿದ್ದಾರೆ. ಆಧುನಿಕ ಬೆಂಗಳೂರು ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹಾನ್ ಚೇತನ ಅವರು ಎಂದರು.
ಆಂಧ್ರಪ್ರದೇಶ ಸರ್ಕಾರದ ಮಾಜಿ ಕಾನೂನು ಸಚಿವ ಎಚ್.ಬಿ.ನರಸೇಗೌಡ, ಆಂಧ್ರ ವಿಧಾನ ಪರಿಷತ್ ಮಾಜಿ ಸದಸ್ಯ ಗುಂಡುಮಲ ತಿಪ್ಪೇಸ್ವಾಮಿ, ಆಂಧ್ರ ಒಕ್ಕಲಿಗ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ, ಮಾಜಿ ಜಿಪಂ ಅಧ್ಯಕ್ಷ ಎಂ.ಜಯಣ್ಣ, ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ಜೆ.ರಾಜು, ಜಿ.ವಿ.ಕೃಷ್ಣಮೂರ್ತಿ, ಧನಂಜಯ್,ಈರಲಿಂಗೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಹನುಮಂತರಾಯ, ಡಿ.ನರಸಿಂಹಮೂರ್ತಿ, ಅನಂತರಾಜು, ನಳಿನಿ, ಕಾಂತರಾಜು, ಡಿ.ನಾಗರಾಜು ಮುಂತಾದವರು ಹಾಜರಿದ್ದರು.