ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ, ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಯಲ್ಲಾಪುರದೇಶದಲ್ಲೇ ಮಲೆನಾಡಿನ ಜಿಲ್ಲೆಗಳ ಸಹಕಾರಿ ಸಂಘಗಳು ಉತ್ತಮ ಹೆಸರನ್ನು ಗಳಿಸಿದೆ. ಆದರೂ ರಾಜಕೀಯ ಹಸ್ತಕ್ಷೇಪಗಳಿಂದಾಗಿ ಕೆಲವೊಮ್ಮೆ ಸಮಸ್ಯೆಗಳು ಉಂಟಾಗುತ್ತಿವೆ. ರೈತರ ಜೀವನಾಡಿಯಾದ ಸಹಕಾರಿ ಸಂಘಗಳು ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. ಈ ಸಂಘಗಳು ಸರ್ವವ್ಯಾಪಿ, ಸರ್ವಸ್ಪರ್ಶಿ ಕೆಲಸ ಮಾಡುತ್ತಿರುವುದರಿಂದ ತನ್ನತನ ಉಳಿಸಿಕೊಂಡು ಬಂದಿವೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.ಮಂಗಳವಾರ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಾಗೃತ ಸದಸ್ಯರಿದ್ದರೆ ಸಹಕಾರಿ ಸಂಘದ ಬೆಳವಣಿಗೆ ಕಷ್ಟವಲ್ಲ ಎಂಬುದಕ್ಕೆ ಈ ಸಂಘದಿಂದ ಕಾಣಬಹುದು. ಸಂಘದ ರೂವಾರಿಗಳ ಮನಸ್ಥಿತಿಗನುಗುಣವಾಗಿ ಸಂಘದ ಸದಸ್ಯರು ಬೆಂಬಲಿಸುತ್ತಾರೆ. ಈ ರೀತಿ ವಿವಿಧೋದ್ದೇಶಗಳ ಸಹಕಾರಿ ಸಂಘಗಳಾಗಿ ಕೆಲಸ ಮಾಡಿದಾಗ ಅಂತಹ ಸಂಘಗಳು ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದರು. ಮೀಟಿಂಗ್ ಹಾಲ್ ಉದ್ಘಾಟಿಸಿದ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ದಾರಿ ತಪ್ಪುತ್ತಿರುವ ಸಹಕಾರಿ ಕ್ಷೇತ್ರವನ್ನು ಸರಿಪಡಿಸಬೇಕಾದ ಅಗತ್ಯವಿದೆ. ಸಹಕಾರಿ ಕ್ಷೇತ್ರ ಸರಿಯಾದ ದಾರಿಯಲ್ಲಿ ಸಾಗಲು ಕ್ಷೇತ್ರವನ್ನು ಮುನ್ನಡೆಸುವ ಆಡಳಿತ ಮಂಡಳಿಯವರು, ಸಿಬ್ಬಂದಿ ಹಾಗೂ ಸದಸ್ಯರು ಒಟ್ಟಾಗಿ ಮುನ್ನಡೆಯಬೇಕಿದೆ. ರೈತರು ಸಹಕಾರಿ ಸಂಘಗಳ ಮೂಲಕವೇ ವ್ಯವಹಾರ ಮಾಡಬೇಕು. ಎಲ್ಲ ಸಹಕಾರಿ ಸಂಸ್ಥೆಗಳು ಉಳಿಯಬೇಕಾದರೆ ಎಲ್ಲ ಸಹಕಾರಿ ಸಂಸ್ಥೆಗಳೂ ನಮ್ಮದೆಂಬ ಭಾವನೆ ಇರಬೇಕು. ಶುಭ್ರ ಬಟ್ಟೆ ಧರಿಸಿದರೆ ಆಗದು, ಶುದ್ಧ ಮನಸ್ಸಿರಬೇಕು ಎಂದ ಅವರು, ಅಡಕೆ ಬೆಳೆಗಾರರು ಬಹುದೊಡ್ಡ ಆಪತ್ತಿಗೆ ಸಿಲುಕುತ್ತಿದ್ದಾರೆ. ಸಿದ್ಧಾಪುರದಲ್ಲಿ ಶೇ.೯೦ರಷ್ಟು ಅಡಕೆ ಬೆಳೆ ಇಲ್ಲವಾಗಿದೆ. ನಮ್ಮ ಅಡಕೆ ಬೆಳೆಗಾರರ ಮಹಾಮಂಡಳದಿಂದ ಹಲವು ರೀತಿಯ ಸಂಶೋಧನೆಯನ್ನು ನಡೆಸಿ, ರೋಗ ಪತ್ತೆ ಪರಿಹಾರದ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಸಂಸ್ಥೆ ಎಲ್ಲ ರೈತರನ್ನು, ಸಹಕಾರಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತದೆ ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿದರು. ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು.

ಯು.ಕೆ. ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ, ಮಲೆನಾಡು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಉಮೇಶ ಭಾಗ್ವತ, ಸಂತೋಷ ಭಟ್ಟ ಹಳವಳ್ಳಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಟಿಎಸ್‌ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಹೆಗಡೆ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಪ್ರಿಯಾ ಭಟ್ಟ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಟಿ.ಆರ್. ಹೆಗಡೆ ಸ್ವಾಗತಿಸಿದರು. ನಿರ್ದೇಶಕ ನರಸಿಂಹ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ಬಣ್ಣ ದಾನ್ಯಾನಕೊಪ್ಪ, ಗೋಪಾಲಕೃಷ್ಣ ಭಟ್ಟ ನಿರ್ವಹಿಸಿದರು. ಮಹಾಬಲೇಶ್ವರ ಭಟ್ಟ ಮಾಲದಮನೆ ವಂದಿಸಿದರು.