ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದಡಾರ, ರುಬೆಲ್ಲಾ ಕಾಯಿಲೆಗಳ ನಿರ್ಮೂಲನೆಗಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯದಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನಸಂಖ್ಯೆ ನಿಯಂತ್ರಣ, ದಡಾರ, ರುಬೆಲ್ಲಾ ನಿಯಂತ್ರಣದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಲಸಿಕಾಕರಣ ಅಭಿಯಾನ
ಜಿಲ್ಲೆಯಲ್ಲಿ ದಡಾರ, ರುಬೆಲ್ಲಾ ಮತ್ತಿತರ ಕಾಯಿಲೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಲಸಿಕಾಕರಣ ಅಭಿಯಾನವನ್ನು ಸಮರ್ಪಕವಾಗಿ ಮುಂದುವರೆಸಬೇಕಾಗಿರುತ್ತದೆ. ಗರ್ಭಿಣಿ ಮಹಿಳೆಯರು ಮತ್ತು 0-5 ವರ್ಷಗಳ ಒಳಗಿನ ಮಕ್ಕಳ ಮಾಹಿತಿಯನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಹಂಚಿಕೊಳ್ಳುವುದು. ಮನೆ ಮನೆ ಭೇಟಿ ನೀಡಿ ಲಸಿಕೆ ಪಡೆಯಬೇಕಾಗಿರುವ ಮತ್ತು ಪಡೆಯದೆ ಬಿಟ್ಟು ಹೋಗಿರುವವರ ವಿವರವನ್ನು ಪರಿಶೀಲಿಸಬೇಕು. ಅಂತಹವರ ವಿವರಗಳವನ್ನು ಲಸಿಕಾಕರಣದ ದಿನಾಂಕಗಳಂದು ಬಳಸಿಕೊಂಡು ಶೇ. 100 ರಷ್ಟು ಲಸಿಕಾಕರಣದ ಗುರಿಸಾಧಿಸಬೇಕು ಎಂದರು.ಹೊಸದಾಗಿ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ವಿವರವನ್ನು ಶಿಕ್ಷಣ ಇಲಾಖೆಯವರು ಪರಿಶೀಲಿಸಬೇಕು. ಲಸಿಕಾಕರಣದ ಗುರಿ ಸಾಧನೆಯ ಸಮೀಕ್ಷೆ ನಡೆಸಲು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ಪಡೆಯುತ್ತಿರುವ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಲು ಮುಂದಾಗಬೇಕು ಎಂದು ಹೇಳಿದರು.
ಲಿಂಗಾನುಪಾತದಲ್ಲಿ ಕೊರತೆಜನಸಂಖ್ಯೆ ನಿಯಂತ್ರಣ, ಲಿಂಗಾನುಪಾತ ಸಮತೋಲನಾ ಕಾರ್ಯಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುತ್ತದೆ. 2024ರ ಜನವರಿಯಿಂದ ಮೇ ಅಂತ್ಯದವರೆಗೆ ಲಭ್ಯವಿರುವ ಇ-ತಂತ್ರಾಂಶದ ಮಾಹಿತಿ ಪ್ರಕಾರ 3,425 ಗಂಡು ಮತ್ತು 3,174 ಹೆಣ್ಣು ಮಕ್ಕಳ ಜನನವಾಗಿರುತ್ತದೆ. ಈ ಪ್ರಕಾರ ಲಿಂಗಾನುಪಾತದ ಪ್ರಮಾಣ ಶೇ. 93 ರಷ್ಟು ಆಗಿರುತ್ತದೆ. ಚುನಾವಣಾ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಮಹಿಳಾ ಮತದಾರರೇ ಪುರುಷ ಮತದಾರರಿಗಿಂತ ಹೆಚ್ಚಿದ್ದಾರೆ. ಆದರೆ ಜಿಲ್ಲೆಯ ಲಿಂಗಾನುಪಾತದ ಪ್ರಮಾಣದಲ್ಲಿ ಶೇ. 7 ರಷ್ಟು ಕೊರತೆ ಇದೆ ಎಂದರು.ಈ ಕೊರತೆಯನ್ನು ತಗ್ಗಿಸಲು ಭ್ರೂಣ ಲಿಂಗ ಪತ್ತೆ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳು ಅನಿರೀಕ್ಷಿತ ದಾಳಿಗಳನ್ನು ನಡೆಸಿ ಕೇಂದ್ರಗಳು ನಿಯಮಾವಳಿ ರೀತ್ಯ ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ನಿಯಮಗಳನ್ನು ಉಲ್ಲಂಘಿಸುವ ಕೇಂದ್ರಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮವನ್ನು ಜರುಗಿಸಬೇಕು. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದರು. ಕಫಾ ಪರೀಕ್ಷೆ ಮಾಡಿಸಿಕೊಳ್ಳಿ
ಯಾವುದೇ ವ್ಯಕ್ತಿಗಳಲ್ಲಿ ದೀರ್ಘಕಾಲಿಕ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡರೆ ಕಫಾ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ಕ್ಷಯ ದೃಢವಾದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಮುಖ್ಯವಾಗಿ ಕ್ಷಯ ರೋಗದ ಆರಂಭದಲ್ಲೆ ಪರೀಕ್ಷೆಗೆ ಒಳಪಟ್ಟಲ್ಲಿ ಗುಣಪಡಿಸುವುದು ಸುಲಭವಾಗಲಿದೆ. ಜಿಲ್ಲೆಯಲ್ಲಿ 2024ರ ಜನವರಿಯಿಂದ ಇವರೆಗೆ 793 ಜನರು ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ. ನಿಕ್ಷಯ ಮಿತ್ರ ಯೋಜನೆಯಡಿ 266 ರೋಗಿಗಳು ನೊಂದಾಯಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಸಾರ್ವಜನಿಕರಲ್ಲಿ, ಶಾಲಾ ಮಕ್ಕಳಲ್ಲಿ ಕ್ಷಯ ರೋಗದ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಲಭ್ಯವಿರುವ ಆರೋಗ್ಯ ಚಿಕಿತ್ಸೆಗಳ ಬಗ್ಗೆ ತಿಳಿಸಿಕೊಡಬೇಕು. ಮನೆಗಳ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶುಚಿತ್ವ ಕಾಪಾಡಲು ಪ್ರೆರೇಪಿಸಬೇಕು. ಮಳೆಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ಡೆಂಗ್ಯೂ, ಚಿಕುಂಗುನ್ಯ, ಕಾಲರಾ ಇನ್ನು ಮುಂತಾದ ಜಲಜನ್ಯ ಹಾಗೂ ಕೀಟಜನ್ಯ ಕಾಯಿಲೆಗಳು ಹೆಚ್ಚುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಸೊಳ್ಳೆ ಪರದೆ, ಸೊಳ್ಳೆ ನಿಯಂತ್ರಣ ದ್ರಾವಕ ಮುಂತಾದ ರೋಗ ನಿರೋಧಕ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.