ಬಿಜೆಪಿಯಿಂದಲೂ ನಿಗಮ ಹಣ ಅಕ್ರಮ ವರ್ಗ: ಡಿಕೆಶಿ

| Published : Jun 07 2024, 01:35 AM IST / Updated: Jun 07 2024, 10:22 AM IST

DK Shivakumar

ಸಾರಾಂಶ

ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ನಿಗಮಗಳ ಹಣವನ್ನು ಬೇರೆ ಬ್ಯಾಂಕ್‌ಗಳಿಗೆ ಅಕ್ರಮವಾಗಿ ವರ್ಗಾಯಿಸಿರುವ ಕುರಿತು ಮಾಹಿತಿ ಮತ್ತು ದಾಖಲೆಗಳು ದೊರೆತಿದ್ದು, ಅದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

 ಬೆಂಗಳೂರು :  ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ನಿಗಮಗಳ ಹಣವನ್ನು ಬೇರೆ ಬ್ಯಾಂಕ್‌ಗಳಿಗೆ ಅಕ್ರಮವಾಗಿ ವರ್ಗಾಯಿಸಿರುವ ಕುರಿತು ಮಾಹಿತಿ ಮತ್ತು ದಾಖಲೆಗಳು ದೊರೆತಿದ್ದು, ಅದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯಲ್ಲಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ಪಾತ್ರವಿಲ್ಲ ಎಂಬುದನ್ನು ತಿಳಿಸಿದ್ದಾರೆ. ಆದರೂ, ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿದ್ದಾರೆ. ಯಾವ ಸಚಿವರೂ ನಿಗಮಗಳ ಅಷ್ಟು ದೊಡ್ಡ ಪ್ರಮಾಣದ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಆದರೂ, ತನಿಖೆಗೆ ತಮ್ಮಿಂದ ತೊಂದರೆಯಾಗಬಾರದು ಹಾಗೂ ಪಕ್ಷಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದರು.

ಬಿಜೆಪಿ ಅವಧಿಯ ಅಕ್ರಮ ಪತ್ತೆ:  ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರೀತಿ ನಿಗಮಗಳ ಹಣವನ್ನು ಅಕ್ರಮವಾಗಿ ಬೇರೆ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ. ಅವುಗಳ ಕುರಿತು ಲೋಕಾಯುಕ್ತ ಸೇರಿದಂತೆ ಇನ್ನಿತರ ತನಿಖೆಗಳು ನಡೆದಿವೆ. ಆನಂತರ ಬ್ಯಾಂಕ್‌ಗಳಿಂದ ಹಣ ವಾಪಸು ಪಡೆಯಲಾಗಿದೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅದನ್ನೂ ಪರಿಶೀಲಿಸುತ್ತೇವೆ. ಅದರ ಸತ್ಯಾಸತ್ಯ ತಿಳಿದುಕೊಳ್ಳುತ್ತೇವೆ. ಬಿಜೆಪಿಯ ಹಲವು ನಾಯಕರು ಈ ರೀತಿ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಎಲ್ಲವನ್ನೂ ತನಿಖೆ ನಡೆಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ನಿಗಮಗಳ ಅಧ್ಯಕ್ಷರೊಂದಿಗೆ ಸಭೆ:  ನಿಗಮಗಳ ಹಣ ಬಳಕೆಯನ್ನು ಎಚ್ಚರಿಕೆಯಿಂದ, ನಿಯಮದಂತೆ ಮಾಡಬೇಕು ಎಂಬುದರ ಕುರಿತಂತೆ ಮಾತನಾಡಲು ಎಲ್ಲ ನಿಗಮಗಳ ಅಧ್ಯಕ್ಷರ ಜತೆಯಲ್ಲಿ ಸಭೆ ನಡೆಸುತ್ತೇನೆ. ಬಡ್ಡಿ ಆಸೆಗಾಗಿ ಸ್ಥಳೀಯ ಬ್ಯಾಂಕ್‌, ಸಹಕಾರ ಸಂಘಗಳಿಗೆ ನಿಗಮದ ಹಣ ವರ್ಗಾವಣೆ ಮಾಡಲಾಗುತ್ತದೆ. ಅಂತಹವನ್ನೆಲ್ಲ ಮಾಡದಂತೆ ನಿಗಮದ ಅಧ್ಯಕ್ಷರಿಗೆ ತಿಳಿಸಲಾಗುವುದು ಹಾಗೂ ನಿಗಮದ ಕಾರ್ಯಚಟುವಟಿಕೆ ಬಗ್ಗೆ ನಿಗಾವಹಿಸುವಂತೆಯೂ ತಿಳಿಸಲಾಗುವುದು. ಅಲ್ಲದೆ, ಮುಖ್ಯಮಂತ್ರಿಗಳು ಕೂಡ ಆರ್ಥಿಕ ಇಲಾಖೆಗೆ ಸೂಚನೆಗಳನ್ನು ನೀಡಿದ್ದು, ಈ ರೀತಿಯ ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.