ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ದೇವರಾಯನ ಪಟ್ಟಾಭಿಷೇಕ ದಿನದ ತಾಮ್ರ ಶಾಸನ ಪತ್ತೆ

| N/A | Published : Apr 02 2025, 02:01 AM IST / Updated: Apr 02 2025, 12:25 PM IST

ಸಾರಾಂಶ

ವಿಜಯನಗರ ಸಾಮ್ರಾಜ್ಯದ 1ನೇ ದೇವರಾಯ ಪಟ್ಟಾಭಿಷೇಕದ ತಾಮ್ರ ಶಾಸನ ಪತ್ತೆ ಆಗಿದೆ. ಇದರಿಂದ ಆತನ ಪಟ್ಟಾಭಿಷೇಕದ ನಿಖರ ದಿನಾಂಕ ಗೊತ್ತಾಗಿದೆ.

  ಬೆಂಗಳೂರು : ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ದೊರೆ ದೇವರಾಯ-1 ಪಟ್ಟಾಭಿಷೇಕ ನಡೆದ ನಿಖರ ದಿನಾಂಕ ತಿಳಿಸುವ ಮಹತ್ವದ ತಾಮ್ರಫಲಕ ಪತ್ತೆ ಆಗಿರುವುದಾಗಿ ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ (ಶಿಲಾಶಾಸನ) ಡಾ.ಮುನಿರತ್ನಂ ರೆಡ್ಡಿ ತಿಳಿಸಿದರು.

ಇಲ್ಲಿನ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾದ ತಾಮ್ರ ಫಲಕ ಪ್ರದರ್ಶಿಸಿದ ಅವರು, ತಾಮ್ರ ಫಲಕ ವಿಜಯನಗರದ ಸಂಗಮ ದೊರೆ ದೇವರಾಯ-1 ಕಾಲದ್ದಾಗಿದೆ. ಇದರ ಮೇಲೆ ಶಕ 1328 ವ್ಯಾಯಾ, ಕಾರ್ತಿಕ, ಬಾ. 10, ಅಂದರೆ ಕ್ರಿ.ಶ.1406 ನವೆಂಬರ್ 5ರಂದು ದೇವರಾಯ ಪಟ್ಟಾಭಿಷೇಕ ಮಾಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದರು.

ತಾಮ್ರ ಫಲಕವು ನಾಗರಿ ಲಿಪಿಯಲ್ಲಿದ್ದು, ಸಂಸ್ಕೃತ, ಕನ್ನಡದ ಭಾಷೆಯಲ್ಲಿ ಓದಬಹುದಾಗಿದೆ. ಇದು ಸಂಗಮ ವಂಶಾವಳಿಯನ್ನು ತಿಳಿಸುತ್ತ ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಹಂಪ, ಬುಕ್ಕ, ಮಾರಪ, ಮುದ್ದಪ್ಪರಿಂದ ಆರಂಭಗೊಂಡ ಸಂಗಮ ರಾಜವಂಶವನ್ನು ತಿಳಿಸುತ್ತದೆ ಎಂದು ವಿವರಿಸಿದರು.

ಪಟ್ಟಾಭಿಷೇಕದ ಸಂದರ್ಭದಲ್ಲಿ ಗುಡಿಪಳ್ಳಿ, ರಾಜೇಂದ್ರಮಡ ಮತ್ತು ಉದಯಪಳ್ಳಿ ಗ್ರಾಮಗಳನ್ನು ಸೇರಿಸಿ ದೇವರಾಯಪುರ ಅಗ್ರಹಾರ ಎಂದು ಮರು ನಾಮಕರಣ ಮಾಡಿರುವುದು, ಅದನ್ನು 61 ಭಾಗಗಳಾಗಿಸಿ ವಿವಿಧ ಗೋತ್ರಗಳ ಬ್ರಾಹ್ಮಣರಿಗೆ ದಾನ ಮಾಡಿರುವುದು, ಇದರಲ್ಲಿ ಈಗಿನ ಮುಳಬಾಗಿಲು, ಹೊಡೆನಾಡ-ಸ್ಥಳ ಎಂಬುದು ಗಡಿಯಾಗಿತ್ತು ಎಂದು ಕೂಡ ತಾಮ್ರದ ಪಟ್ಟಿಗಳಲ್ಲಿ ಉಲ್ಲೇಖವಾಗಿದೆ ಎಂದರು.

ಉಪ ಅಧೀಕ್ಷಕ ಶಾಸನತಜ್ಞ ಡಾ.ಎಸ್‌.ನಾಗರಾಜಪ್ಪ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ತಾಮ್ರ ಫಲಕದಲ್ಲಿ ಸಾಮಾನ್ಯವಾಗಿ ವರಾಹ ಮುದ್ರೆ ಕಂಡುಬರುತ್ತದೆ. ಆದರೆ ಇದರಲ್ಲಿ ವಿಶೇಷವಾಗಿ ವಾಮನ ಮುದ್ರೆ ಇದೆ. ಅದೇ ವರ್ಷ ನ.25ರಂದು ಆತ ಹೊರಡಿಸಿದ್ದ ಶಾಸನ ಈವರೆಗಿನ ದೇವರಾಯನ ಕುರಿತ ಅತ್ಯಂತ ಹಳೆಯ ಸಾಕ್ಷ್ಯವಾಗಿತ್ತು. ಇದು ಪಟ್ಟಾಭಿಷೇಕದ ದಿನ ತಿಳಿಸುವ ಜೊತೆಗೆ ದೇವರಾಯನ ಕುರಿತು ಸಿಕ್ಕ ಹಳೆಯ ಫಲಕವಾಗಿದೆ ಎಂದು ತಿಳಿಸಿದರು.

ತಾಮ್ರ ಶಾಸಕ ಇದ್ದರೆ ಕೊಡಿ

ಸಾರ್ವಜನಿಕರು ತಮ್ಮ ಬಳಿ ತಾಮ್ರದ ಫಲಕ ಇದ್ದಲ್ಲಿ ಭಾರತೀಯ ಪುರಾತತ್ವ ಇಲಾಖೆ ಗಮನಕ್ಕೆ ತನ್ನಿ. ಅದನ್ನು ನಾವು ವಶಕ್ಕೆ ಪಡೆಯದೆ ಕೇವಲ ಅದರ ಪಡಿಯಚ್ಚು ಪಡೆಯುತ್ತೇವೆ. ಫಲಕವನ್ನು ನೋಂದಣಿ ಮಾಡಿಸಿ ಕೊಡುತ್ತೇವೆ. ಇದರಿಂದ ಇತಿಹಾಸ ನಾಶವಾಗದೆ ಸಂರಕ್ಷಿಸಬಹುದು. ಇತಿಹಾಸದ ಕೊಂಡಿ ಉಳಿಸಬಹುದು ಎಂದು ಡಾ। ಎಸ್‌.ನಾಗರಾಜಪ್ಪ ಮನವಿ ಮಾಡಿಕೊಂಡರು.

ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಂ.ಪರೇಖ್, ವ್ಯವಸ್ಥಾಪಕ ಹಾರ್ದಿಕ್‌ ಇದ್ದರು.