ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಕೋವಿಡ್ ನ ಮೊದಲು ಮತ್ತು ಎರಡನೇ ಅಲೆಯಲ್ಲಿ ಜಿಲ್ಲೆಯ 97,347 ಸೋಂಕಿತ ಪ್ರಕರಣಗಳ ಪೈಕಿ ಮೊದಲ ಅಲೆಯಲ್ಲಿ 597 ಹಾಗೂ ಎರಡನೇ ಅಲೆಯಲ್ಲಿ 1066 ಸೇರಿದಂತೆ ಒಟ್ಟು 1663 ಜನರು ಸಾವಿಗೀಡಾದರು!ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿಯೇ ಹೆಚ್ಚು ಜನರು ಸಾವಿನ ಮನೆಯ ಕದ ತಟ್ಟಿದರು. ಗಮನಾರ್ಹ ಸಂಗತಿ ಎಂದರೆ ಎರಡು ಅಲೆಯಲ್ಲಿ ಸಾವಿಗೀಡಾದವರ ಪೈಕಿ ಹೆಚ್ಚಿನವರು(ಶೇ. 73) 81 ವರ್ಷ ಮೇಲ್ಪಟ್ಟವರಾಗಿದ್ದರು.
ಕೋವಿಡ್ ದಾಳಿ ಮೊದಮೊದಲು ಚೀನಾದಲ್ಲಿ ಕಾಣಿಸಿಕೊಂಡು, ಬಳಿಕ ಭಾರತ ಪ್ರವೇಶ ಪಡೆದಾಗಲೂ ಗಣಿ ಜಿಲ್ಲೆಯ ಜನರಿಗೆ ಸಾವು- ನೋವಿನ ಅಂದಾಜುಗಳಿರಲಿಲ್ಲ. ಅದರ ತೀವ್ರತೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಹೆಚ್ಚು ಆತಂಕವೂ ಕಂಡುಬರಲಿಲ್ಲ. ಎಲ್ಲೋ ಕೋವಿಡ್ ಎಂಬ ರೋಗ ಬಂದಿದೆಯಂತೆ. ಸಾವು- ನೋವುಗಳು ಹೆಚ್ಚಾಗುತ್ತವೆಯಂತೆ ಎಂದೇ ಮಾತನಾಡಿಕೊಳ್ಳುತ್ತಿದ್ದ ಜನರು, ಜಿಲ್ಲೆಯ ಪ್ರವೇಶ ಪಡೆದು, ಸಾವಿನ ಸರಣಿ ಶುರುವಾದಾಗಷ್ಟೇ ಎಚ್ಚೆತ್ತುಕೊಂಡರು!ಖಾಸಗಿ ಆಸ್ಪತ್ರೆಗಳು ಬಳಕೆ: ಕೋವಿಡ್‌ನ ಮೊದಲು ಮತ್ತು ಎರಡನೇ ಅಲೆಯಲ್ಲಿ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬಳಸಿಕೊಳ್ಳಲಾಗಿತ್ತು. ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆ, ಬಳ್ಳಾರಿಯ ಶ್ರೀನಿವಾಸ ಆಸ್ಪತ್ರೆ, ಶಾವಿ ಆಸ್ಪತ್ರೆ, ಬಳ್ಳಾರಿ ಹೃದಯಾಲಯ, ವಾಯ್ಸ್ ಆಸ್ಪತ್ರೆಗಳನ್ನು ಕೋವಿಡ್ ಕೇಂದ್ರಗಳಾಗಿ ಬದಲಾಯಿಸಲಾಯಿತು.
ಇನ್ನು ವಿಮ್ಸ್ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಜಿಲ್ಲೆಯ ತಾಲೂಕು ಆಸ್ಪತ್ರೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಯಿತು.ಇನ್ನು ನಗರದ ಪ್ರತಿಷ್ಠಿತ ಹೋಟೆಲ್ ಹಾಗೂ ಲಾಡ್ಜ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಬದಲಾಯಿಸಲಾಯಿತು. ದಿನದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚಿಕಿತ್ಸೆ ನೀಡುವುದು ಜಿಲ್ಲಾಡಳಿತಕ್ಕೆ ಸವಾಲಾಯಿತು. ಹೀಗಾಗಿ ನಗರದ ಹೋಟೆಲ್ ಮಾಲೀಕರ ಮನವೊಲಿಸಿ, ಕೋವಿಡ್ ಆರೈಕೆ ಕೇಂದ್ರಗಳನ್ನಾಗಿಸಲಾಯಿತು. ನಗರದ ಹೋಟೆಲ್ ಪೋಲಾ, ಬಾಲಾ, ಮಯೂರ, ಪವನ್, ಚಾಲುಕ್ಯ, ಅಶೋಕ ಕಂಫರ್ಟ್ ಹೋಟೆಲ್‌ಗಳು ಆರೈಕೆ ಕೇಂದ್ರಗಳಾದವು. ಕೋವಿಡ್ ನ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಈ ಆರೈಕೆ ಕೇಂದ್ರಗಳು ಭಾರೀ ಪ್ರಮಾಣದ ದುಡ್ಡು ಮಾಡಿಕೊಂಡವು ಎಂಬ ಆರೋಪಗಳು ಕೇಳಿ ಬಂದವು.
ಬಿಲ್ ಪಾವತಿಯಾಗಿದೆ: ಕೋವಿಡ್ ಅಲೆಯ 97347 ಸೋಂಕಿತರ ಪೈಕಿ 75,346 ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಉಳಿದ 22,001 ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲ ಬಿಲ್‌ಗಳು ಪಾವತಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಸರ್ಕಾರಿ ಆಸ್ಪತ್ರೆಗಳು ಭರ್ತಿಯಾಗಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೇಡಿಕೆ ಬಂತು. ಹೀಗಾಗಿ ಜಿಲ್ಲೆಯ ವಿವಿಧೆಡೆಗಳ ಜನರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು. ಅಗತ್ಯ ಸಿದ್ಧತೆ: ಜಿಲ್ಲೆಯಲ್ಲಿ ಇದೀಗ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕರು ಭಯಬೀಳುವ ಅಗತ್ಯವಿಲ್ಲ. ಜೆಎನ್. 1 ಪ್ರಕರಣ ಎಲ್ಲೂ ಕಂಡುಬಂದಿಲ್ಲ. ಹೀಗಾಗಿ ಜನರು ಭೀತಿಗೊಳ್ಳುವ ಅಗತ್ಯವಿಲ್ಲ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೈ. ರಮೇಶ್ ಬಾಬು ತಿಳಿಸಿದರು.