ಲೋಕಸಭೆ ಚುನಾವಣೆ ನಂತರ ಪಾಲಿಕೆ ವಿಭಜನೆ; ಅಧ್ಯಯನ ನಡೆಸುತ್ತಿದೆ ಬಿ.ಎಸ್.ಪಾಟೀಲ್‌ ಸಮಿತಿ

| Published : Feb 20 2024, 01:56 AM IST / Updated: Feb 20 2024, 12:35 PM IST

ಲೋಕಸಭೆ ಚುನಾವಣೆ ನಂತರ ಪಾಲಿಕೆ ವಿಭಜನೆ; ಅಧ್ಯಯನ ನಡೆಸುತ್ತಿದೆ ಬಿ.ಎಸ್.ಪಾಟೀಲ್‌ ಸಮಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿ ವಿಭಜನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಲೋಕಸಭಾ ಚುನಾವಣೆ ನಂತರ ಬಿಬಿಎಂಪಿ ವಿಭಜನೆಗೆ ವಿಶೇಷ ಕಾಯ್ದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದ ಎಂದು ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವಿಭಜನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಲೋಕಸಭಾ ಚುನಾವಣೆ ನಂತರ ಬಿಬಿಎಂಪಿ ವಿಭಜನೆಗೆ ವಿಶೇಷ ಕಾಯ್ದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಆಡಳಿತ ಸುಧಾರಣೆಗಾಗಿ ಬಿಬಿಎಂಪಿಯನ್ನು ವಿಭಜಿಸಬೇಕು ಎಂದು ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಹೇಳಿದ್ದರು. 

ಅದಕ್ಕಾಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌.ಪಾಟೀಲ್ ನೇತೃತ್ವದ ಸಮಿತಿಯನ್ನೂ ರಚಿಸಿ, ವರದಿ ಪಡೆದಿದ್ದರು. ಆದರೆ, ಅದರ ಅನುಷ್ಠಾನ ಮಾಡಿರಲಿಲ್ಲ. 

ಅದೇ ರೀತಿ ಕಳೆದ ವರ್ಷ ಮತ್ತೊಮ್ಮೆ ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಬಿ.ಎಸ್‌.ಪಾಟೀಲ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಬಿಬಿಎಂಪಿ ವಿಭಜನೆ ಸೇರಿದಂತೆ ಅದಕ್ಕೆ ಪೂರಕವಾದ ಅಂಶಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸುತ್ತಿದೆ. ಅಷ್ಟರೊಳಗೆ ಬಿಬಿಎಂಪಿ ವಿಭಜನೆ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಬಾಕ್ಸ್‌...

ವಿಭಜನೆಗೆ ಡಿಕೆಶಿ ಒಲವು?
ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಬಿ.ಎಸ್‌. ಪಾಟೀಲ್‌ ಸಮಿತಿ ಈಗಾಗಲೆ ಹಲವು ಸಭೆಗಳನ್ನು ನಡೆಸಿದೆ. ಸಭೆಯಲ್ಲಿ ಬಿಬಿಎಂಪಿಯನ್ನು 3 ಭಾಗಗಳಾಗಿ ವಿಂಗಡಿಸಿ, ಆಡಳಿತ ಸುಧಾರಣೆ ಮಾಡುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ಬಿಬಿಎಂಪಿ ವಿಭಜನೆಗೆ ಸರ್ಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಲೋಕಸಭೆ ಚುನಾವಣೆ ನಂತರ ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿ ಬಿಬಿಎಂಪಿ ವಿಭಜನೆ ಕಾಯ್ದೆ ಮಂಡಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

2 ವರ್ಷವಾದರೂ ಚುನಾವಣೆ ಕಷ್ಟ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಒತ್ತಡ ಹೇರುತ್ತಿತ್ತು. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟರ್‌ಗಳು ಬಿಬಿಎಂಪಿ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. 

ಆದರೆ, ಇದೀಗ ಕಾಂಗ್ರೆಸ್‌ ಸರ್ಕಾರ ಜಾರಿಗೆ ಬಂದು ವರ್ಷವಾಗುತ್ತಿದ್ದರೂ, ಬಿಬಿಎಂಪಿ ಚುನಾವಣೆ ನಡೆಸಿಲ್ಲ. ಅದರ ನಡುವೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಆರಂಭಿಸಿದರೆ, 2026ರವರೆಗೆ ಚುನಾವಣೆ ನಡೆಯುವುದು ಅನುಮಾನ ಎನ್ನುವಂತಾಗಲಿದೆ.