ಕಲಬುರಗಿ: ಚುಚ್ಚುಮದ್ದು ವ್ಯತ್ಯಾಸದಿಂದ ಹಸುಳೆ ಸಾವು

| Published : Feb 20 2024, 01:56 AM IST

ಕಲಬುರಗಿ: ಚುಚ್ಚುಮದ್ದು ವ್ಯತ್ಯಾಸದಿಂದ ಹಸುಳೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹುಟ್ಟಿದ ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ನೀಡುವ ಚುಚ್ಚುಮದ್ದು ವ್ಯತ್ಯಾಸವಾಗಿದ್ದಿಂದ 2.5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಅಫಜಲ್ಪುರ ಪಟ್ಟಣದ ಮಾದಾಬಾಳ ತಾಂಡಾದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಹುಟ್ಟಿದ ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ನೀಡುವ ಚುಚ್ಚುಮದ್ದು ವ್ಯತ್ಯಾಸವಾಗಿದ್ದಿಂದ 2.5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಅಫಜಲ್ಪುರ ಪಟ್ಟಣದ ಮಾದಾಬಾಳ ತಾಂಡಾದಲ್ಲಿ ನಡೆದಿದೆ.

ಮಾದಾಬಾಳ ತಾಂಡಾದ ನಿವಾಸಿ ಶಿವಾಜಿ ರಾಠೋಡ ಅವರ 2.5 ವರ್ಷದ ಮಗು ಆಯುಷ್ ಗೆ ಫೆ.17 (ಶನಿವಾರ) ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಾಂಡಾದಲ್ಲಿರುವ ಮನೆಯಲ್ಲಿ ಲಸಿಕೆ ನೀಡಿದ್ದರು. ಲಸಿಕೆಯ ಬಳಿಕ ಮಗುವಿಗೆ ಜ್ವರ ಕಾಣಿಸಿಕೊಂಡರೆ ಮಾತ್ರೆ ನುಂಗಿಸಿ ಎಂದು ಮಾತ್ರೆ ನೀಡಿದ್ದಲ್ಲದೆ ಫೆ.18ರಂದು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರುವಂತೆಯೂ ತಿಳಿಸಿದ್ದರು. ಮಗುವಿಗೆ ಜ್ವರ ಕಾಣಿಸಿಕೊಂಡಾಗ ಪಾಲಕರು ಮಾತ್ರೆ ನುಂಗಿಸಿದ್ದಾರೆ. ಬಳಿಕ ಮಗುವಿನ ಬಾಯಿಂದ ನೊರೆ ಬರಲಾರಂಭಿಸಿದಾಗ ಗಾಬರಿಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಆಯುಷ್ ಮೃತಪಟ್ಟಿದ್ದಾನೆ.

ಮಗು ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ತಾಂಡಾ ನಿವಾಸಿಗಳು ಹಾಗೂ ಮಗುವಿನ ಸಂಬಂಧಿಕರು ಆಸ್ಪತ್ರೆಗೆ ಮುಂದೆ ಜಮಾವಣೆಗೊಂಡು ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದಲ್ಲದೆ ಸಾವಿಗೆ ನ್ಯಾಯ ಸಿಗುವ ತನಕ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಮಗುವಿನ ಶವದೊಂದಿಗೆ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಸುದ್ದಿ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತಿಕಾಂತ ಸ್ವಾಮಿ ತಡರಾತ್ರಿ 3 ಗಂಟೆಗೆ ಅಫಜಲ್ಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪಾಲಕ ಹಾಗೂ ತಾಂಡಾ ನಿವಾಸಿಗಳ ಅಹವಾಲು ಕೇಳಿ ಮಾತನಾಡಿ ಮಗುವಿನ ಸಾವಿಗೆ ಏನು ಕಾರಣ ಎನ್ನುವುದರ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಆದರೆ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗುತ್ತಿದೆ. ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿನೋದ ರಾಠೋಡ, ಡಿಎಚ್‌ಒ ಡಾ.ರವಿ ಬಿರಾದಾರ, ಆಳಂದ ಸಿಪಿಐ ಮಹಾದೇವ ಪಂಚಮುಖಿ, ಅಫಜಲ್ಪುರ ಪಿಎಸ್‌ಐ ಮಹಿಬೂಬ್ ಅಲಿ, ರೇವೂರ(ಬಿ) ಪಿಎಸ್‌ಐ ನಂದಕುಮಾರ, ದೇವಲ ಗಾಣಗಾಪೂರ ಕ್ರೈಂ ಪಿಎಸ್ಐ ಇದ್ದರು.