ಭರವಸೆ ತುಂಬುವ ಕಾರ್ಯಕ್ರಮ ರಾಜ್ಯದಲ್ಲೇ ವಿನೂತನ

| Published : Feb 20 2024, 01:54 AM IST

ಸಾರಾಂಶ

ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಪರಿಕಲ್ಪನೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮ ರಾಜ್ಯದಲ್ಲಿಯೇ ವಿನೂತನವಾದದ್ದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹನೂರುಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಪರಿಕಲ್ಪನೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮ ರಾಜ್ಯದಲ್ಲಿಯೇ ವಿನೂತನವಾದದ್ದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಶ್ರೀ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಲಾಗಿದ್ಧ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರೀಕ್ಷೆ ಬಗ್ಗೆ ಭಯಪಡೆಯದೇ ಓದಿದ್ದನ್ನು ಮನನ ಮಾಡಿಕೊಂಡು ಪರೀಕ್ಷೆ ಎದುರಿಸಬೇಕು. ಇಂತಹ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆದು ಈ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿ ನಿಮ್ಮೊಡನೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪೌರಕಾರ್ಮಿಕನ ಮಗಳು ರಾಜ್ಯಕ್ಕೆ ಟಾಪರ್ ಆಗಿದ್ದರು. ಹನೂರು ಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುತ್ತಾರೆ ಎಂಬ ವಿಶ್ವಾಸವಿದೆ. ಶಾಸಕ ಎಂ.ಆರ್. ಮಂಜುನಾಥ್ ಗಡಿಯಂಚಿನ ಭಾಗದ ವಿದ್ಯಾರ್ಥಿಗಳು ಅಗ್ರಗಣ್ಯಸ್ಥಾನ ಅಲಂಕರಿಸಲು ಕಳಕಳಿ ಹೊಂದಿದ್ದಾರೆ. ಅವರ ಈ ಆಸೆಯನ್ನು ಈಡೇರಿಸಿ ಎಂದರು.ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ನಮ್ಮ ಶೈಕ್ಷಣಿಕ ವಲಯ ಕಾಡಂಚಿನ ಗಡಿಯಂಚಿನಿಂದ ಕೂಡಿರಬಹುದು ಆದರೆ ಪ್ರಾಕೃತಿಕವಾಗಿ ಶ್ರೀಮಂತವಾಗಿದೆ. ಈ ಪ್ರಕೃತಿಯನ್ನೇ ನಾವು ಸ್ಫೂರ್ತಿ ಪಡೆದು ಯಶಸ್ವನ್ನು ಗಳಿಸಬೇಕು. ವಿದ್ಯಾರ್ಥಿಗಳಿಗೆ ಗುರಿ ಮತ್ತು ಉದ್ದೇಶ ಹೊಂದಿರಬೇಕು. ಈ ದಿಸೆಯಲ್ಲಿ ಗುರಿ ಮುಟ್ಟಲು ವಿದ್ಯಾರ್ಥಿಗಳು ಸನ್ನದ್ಧರಾಗಿ ಎಂದರು. ಕಾರ್ಯಕ್ರಮದಲ್ಲಿ ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಬಿಇಒ ಶಿವರಾಜು ಇನ್ನಿತರರು ಇದ್ದರು.