ಸಾರಾಂಶ
- ದಾವಣಗೆರೆಯಲ್ಲಿ ಕೃಷಿ, ವಿಮಾ ಕಂಪನಿ, ಸಾಂಖ್ಯಿಕ ಅಧಿಕಾರಿಗಳ ಸಭೆ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಂಗಾರು ಹಂಗಾಮಿನ ಫಸಲ್ ವಿಮಾ ಯೋಜನೆಯಡಿ ಬೆಳೆ ಕಟಾವು ಪ್ರಾಯೋಗಿಕ ಪರೀಕ್ಷೆಯಲ್ಲಿ ಕೆಲವು ವ್ಯತ್ಯಾಸಗಳಾಗಿವೆ. ಇವುಗಳನ್ನು ಶೀಘ್ರ ಸರಿಪಡಿಸಿ ರೈತರಿಗೆ ಬೆಳೆ ವಿಮಾ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೃಷಿ ವಿಮಾ ಕಂಪನಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಹಾಗೂ ಸಾಂಖ್ಯಿಕ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಂಗಾರು ಹಂಗಾಮಿನಲ್ಲಿ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮಾ ಕಂತು ಪಾವತಿಸಿದ ರೈತರಿಗೆ ವಿಮಾ ಪರಿಹಾರ ನೀಡಲು ಜಿಲ್ಲೆಯಲ್ಲಿ 40 ಬೆಳೆ ಕಟಾವು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 17 ಕಡೆ ಮಾಡಿದ ಬೆಳೆ ಕಟಾವು ಪ್ರಾಯೋಗಿಕ ಪರೀಕ್ಷೆ ನಡೆಸಿ ಅಪ್‌ಲೋಡ್ ಮಾಡಿದ ಕೆಲವು ವೀಡಿಯೋಗಳಲ್ಲಿನ ಅಂಶಗಳ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಇವುಗಳ ಬಗ್ಗೆ ಪರಿಶೀಲನೆ ನಡೆಸಿ ಇತ್ಯರ್ಥ ಮಾಡಲಾಯಿತು.
ಕೆಲವೊಂದು ಪ್ರಯೋಗಗಳಲ್ಲಿ ನಿಗದಿತ ಸರ್ವೆ ನಂಬರ್ ಬದಲಾಗಿ ಬೇರೆ ಸರ್ವೆ ನಂಬರ್‌ನಲ್ಲಿ ಬೆಳೆ ಕಟಾವು ಪರೀಕ್ಷೆಗಳನ್ನು ಮಾಡಲಾಗಿದೆ. ಇದು ಮಳೆಯಾಶ್ರಿತ ಅಥವಾ ನೀರಾವರಿ ಆಶ್ರಿತವೋ ಎಂಬ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದಾಗ ನೀರಾವರಿ ಅಧಿಸೂಚಿತ ಪ್ರದೇಶವಲ್ಲ ಎಂದು ಸ್ಪಷ್ಟಪಡಿಸಿ, ಜಿಲ್ಲೆಯಲ್ಲಿ ಶೇ70ಕ್ಕಿಂತ ಅಧಿಕ ಮಳೆಯ ಕೊರತೆಯಾಗಿದೆ. ಶತಮಾನದಲ್ಲಿಯೇ ಅತ್ಯಂತ ಭೀಕರ ಬರಗಾಲವಾಗಿದೆ. ಆಗಸ್ಟ್‌ನಲ್ಲಿ ಎಷ್ಟು ಮಳೆ ಬರಬೇಕಾಗಿತ್ತು, ಅದರಲ್ಲಿ ತೀವ್ರ ಕೊರತೆ ಉಂಟಾಗಿದೆ. ಆದ್ದರಿಂದ ಜಿಲ್ಲಾದ್ಯಂತ ಬೆಳೆಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಅವರು ವಿಮಾ ಕಂಪನಿಯ ಅಧಿಕಾರಿಗಳಿಗೆ ಸ್ಪಷ್ಟಪಡಿಸಿ, ರೈತರ ಹಿತದೃಷ್ಟಿಯಿಂದ ರೈತರ ಪರವಾಗಿ ಎಲ್ಲರೂ ಕೆಲಸ ಮಾಡಬೇಕೆಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ವಿಮಾ ಕಂಪನಿ ವಲಯಾಧಿಕಾರಿ ಕೃಷ್ಣರಾಜ, ಸಾಂಖ್ಯಿಕ ಅಧಿಕಾರಿ ನೀಲಾ ಉಪಸ್ಥಿತರಿದ್ದರು.
- - --14ಕೆಡಿವಿಜಿ41ಃ:
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕೃಷಿ ವಿಮಾ ಕಂಪನಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ಸಾಂಖ್ಯಿಕ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.