ಮದಲಾಪುರ ಡೇರಿ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರದ ಆರೋಪ

| Published : Nov 26 2024, 12:46 AM IST

ಮದಲಾಪುರ ಡೇರಿ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರದ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹಲವು ವರ್ಷಗಳಿಂದ ಸಂಘದ ಕಾರ್ಯದರ್ಶಿಯಾಗಿರುವ ಲತಾ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದು, ರೈತರ ಹಾಲಿನ ಗುಣಮಟ್ಟ ಅಳತೆ ಮಾಡಲು ತಾರತಮ್ಯ ನಡೆಸುತ್ತಿದ್ದಾರೆ. ಅಲ್ಲದೆ ಸಂಘದ ಬೈಲ ಸೇರಿದಂತೆ ಹಲವು ಲೆಕ್ಕಪತ್ರ ದಾಖಲೆಗಳನ್ನು ಕಚೇರಿಯಲ್ಲಿ ಸಂಗ್ರಹಿಸಿಟ್ಟಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಕಳೆದ ಮೂರು ತಿಂಗಳಿನಿಂದ ಹಾಲಿನ ಹಣವನ್ನು ನೀಡಿಲ್ಲ. ಆದ್ದರಿಂದ ಈ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಂಡು ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು ಎಂಬ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಮದಲಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಸಂಘದಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು, ಸಹಾಯಕ ನಿಬಂಧಕರ ಕಚೇರಿಯಲ್ಲಿ ದೂರು ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಂಘದ ಕಾರ್ಯದರ್ಶಿಯಾಗಿರುವ ಲತಾ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದು, ರೈತರ ಹಾಲಿನ ಗುಣಮಟ್ಟ ಅಳತೆ ಮಾಡಲು ತಾರತಮ್ಯ ನಡೆಸುತ್ತಿದ್ದಾರೆ. ಅಲ್ಲದೆ ಸಂಘದ ಬೈಲ ಸೇರಿದಂತೆ ಹಲವು ಲೆಕ್ಕಪತ್ರ ದಾಖಲೆಗಳನ್ನು ಕಚೇರಿಯಲ್ಲಿ ಸಂಗ್ರಹಿಸಿಟ್ಟಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಕಳೆದ ಮೂರು ತಿಂಗಳಿನಿಂದ ಹಾಲಿನ ಹಣವನ್ನು ನೀಡಿಲ್ಲ. ಆದ್ದರಿಂದ ಈ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಂಡು ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು ಎಂಬ ಮನವಿ ಮಾಡಿದರು.

ಗ್ರಾಮದ ಮುಖಂಡ ಮಂಜುನಾಥ್ ಮಾತನಾಡಿ, ಸಂಘದ ಕಾರ್ಯದರ್ಶಿ ಪತಿಯ ಉಪಟಳ ಮೇರೆ ಮೀರಿದ್ದು, ಹಾಲಿನ ಗುಣಮಟ್ಟ ಪರೀಕ್ಷೆಯನ್ನು ಈತನೇ ಮಾಡುವುದರಿಂದ ಹಾಲು ಉತ್ಪಾದಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ, ಮಹಿಳಾ ಸಹಕಾರ ಸಂಘದಲ್ಲಿ ಪುರುಷರ ಹಸ್ತಕ್ಷೇಪ ತಪ್ಪಿಸಬೇಕು ಎಂದರು. ಈ ವೇಳೆ ಮಾತನಾಡಿದ ಸಹಾಯಕ ನಿಬಂಧಕ ಖಾಲಿದ್ ಅಹಮ್ಮದ್ ಕಾರ್ಯದರ್ಶಿಯ ಬದಲಾವಣೆ ಅಥವಾ ಹೊಸ ಕಾರ್ಯದರ್ಶಿಯ ಆಯ್ಕೆ ಸಂಘದ ಆಡಳಿತ ಮಂಡಳಿಯ ಅಧಿಕಾರದ ವ್ಯಾಪ್ತಿಗೆ ಬರಲಿದೆ. ನಿಯಮಾನುಸರ ಕಾರ್ಯದರ್ಶಿಯನ್ನು ಬದಲಿಸಬೇಕು ಹೊರತು ಏಕಾಏಕಿ ಕಾರ್ಯದರ್ಶಿಯನ್ನು ಅಮಾನತುಗೊಳಿಸುವಂತಿಲ್ಲ. ಬಾಕಿ ಉಳಿದಿರುವ ಹಾಲಿನ ಹಣವನ್ನು ಹಾಲು ಒಕ್ಕೂಟದ ಗಮನಕ್ಕೆ ತರುವ ಮೂಲಕ ಇನ್ನೊಂದು ವಾರದಲ್ಲಿ ಬಾಕಿ ಹಣ ಹಂಚಲಾಗುವುದು ಎಂದರು.

ಈ ವೇಳೆ ಸಂಘದ ಅಧ್ಯಕ್ಷೆ ಶೋಭಾ, ನಿರ್ದೇಶಕರಾದ ಕಮಲ ಲೋಕೇಶ್, ಮಂಜುಳ ಗೋವಿಂದೆಗೌಡ, ರತ್ನ ಮಹೇಶ್, ಜಯಮ್ಮ ಮಂಜುಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.