ಕೂಡ್ಲಿಗಿ: ನಾನು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸಲ್ಲ. ಒಂದು ವೇಳೆ ಭ್ರಷ್ಟಾಚಾರ ನಡೆದರೆ ಸಾಕ್ಷಿ ಕೊಡಿ; ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರ್ಕಾರದ ಮೂರು ವರ್ಷದ ಸಾಧನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಕೂಡ್ಲಿಗಿ ತಾಲೂಕು ಆಡಳಿತ ರಾಜ್ಯದ ಸರ್ಕಾರ ಸೇವೆಯಲ್ಲಿ ಟಾಪ್ 10ರಲ್ಲಿದೆ. ಇಲ್ಲಿವರೆಗೂ ಮೂರು ವರ್ಷದಲ್ಲಿ ₹2 ಸಾವಿರ ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ಹಗಲಿರುಳು ಸುತ್ತಾಡುವ ಮೂಲಕ ಜನರ, ರೈತರ ಕಷ್ಟ ಕಾರ್ಪಣ್ಯಗಳನ್ನು ಅರಿತು ಸರ್ಕಾರದಲ್ಲಿ ಸಿಎಂ, ಡಿಸಿಎಂ, ಸಚಿವರಿಗೆ ಕೂಡ್ಲಿಗಿ ಹಿಂದುಳಿದ ತಾಲೂಕು ಎಂದು ಮನವರಿಕೆ ಮಾಡಿ ಅನುದಾನ ತಂದಿದ್ದೇನೆ ಎಂದರು.
ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಲೋಕಾರ್ಪಣೆಯಾಗಿದೆ. ನಿಯಮದಂತೆ ಈ ವರ್ಷದ ಜೂನ್ ತಿಂಗಳಿಂದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಮಾಡಲಾಗುತ್ತಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅನುದಾನದಲ್ಲಿರುವ ಬುದ್ಧ ಬಸವ ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ಈಗಾಗಲೇ ಕೂಡ್ಲಿಗಿ ಕ್ಷೇತ್ರದ ನರಸಿಂಹಗಿರಿ, ಕಾಟ್ರಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸುಸಜ್ಜಿತ ಮನೆಗಳ ನಿರ್ಮಾಣಕ್ಕೆ ಎಸ್ಸಿಪಿ ಟಿಎಸ್ಪಿ ಅನುದಾನದಿಂದ ಮಂಜೂರಾತಿ ದೊರೆತಿದೆ ಎಂದು ವಿವರಿಸಿದರು.ಪಟ್ಟಣದಲ್ಲಿ ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ಯೋಜನೆಯಡಿ 850 ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದರು..
ಶಿಕ್ಷಣ ಕ್ಷೇತ್ರದಲ್ಲಿ 15 ಗ್ರಂಥಾಲಯಗಳು, 58 ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಕಾತ್ರಿಕೆಹಟ್ಟಿ, ಜುಮ್ಮೋಬನಹಳ್ಳಿ, ಮ್ಯಾಸರಹಟ್ಟಿ ಮತ್ತು ಅರ್ಜುನ ಚಿನ್ನನಹಳ್ಳಿ ಗ್ರಾಮಗಳಲ್ಲಿ ಸುಮಾರು ₹9 ಕೋಟಿ ವೆಚ್ಚದಲ್ಲಿ ಮೂರು ಪ್ರೌಢಶಾಲೆಗಳ ಕಟ್ಟಡ ನಿರ್ಮಾಣ ಕೈಗೊಳ್ಳಲಾಗಿದೆ. ಗಣಿ ಪ್ರದೇಶಗಳಲ್ಲಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕಾಂಶ ಒದಗಿಸಲು ಈ ಬಾರಿ ಕಾಲೇಜು ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ ಎಂದರು. ರಾಮಸಾಗರಹಟ್ಟಿ ಮತ್ತು ಸಿಡೇಗಲ್ಲು ಗ್ರಾಮಗಳಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳು ಮಂಜೂರಾಗಿವೆ ಎಂದು ಶಾಸಕರು ತಿಳಿಸಿದರು. ಸಾರಿಗೆ ವ್ಯವಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 400 ಹೊಸ ಬಸ್ಸುಗಳು ಸಿದ್ಧವಾಗುತ್ತಿವೆ. ಅದರಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ 15 ಬಸ್ಸುಗಳನ್ನು ಒದಗಿಸುವ ಭರವಸೆ ನೀಡಿದರು. ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಗುಡೇಕೋಟೆ–ಕೂಡ್ಲಿಗಿ ರಸ್ತೆಯ ಸೇತುವೆಗಳು ನಿರ್ಮಾಣದ ಅಂತಿಮ ಹಂತದಲ್ಲಿವೆ. ಕಳೆದ 40 ವರ್ಷಗಳಿಂದ ಬೇಡಿಕೆಯಾಗಿದ್ದ ಕಾತ್ರಿಕೆಹಟ್ಟಿ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದರು. ಉಜ್ಜಿನಿ–ಹೊಸಹಳ್ಳಿ, ಉಜ್ಜಿನಿ–ಕೂಡ್ಲಿಗಿ ರಸ್ತೆ ಡಾಂಬರೀಕರಣ, ಕೊಟ್ಟೂರು- ಜೋಳದಕೂಡ್ಲಿಗಿ, ಹನುಮನಹಳ್ಳಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ದುರಸ್ತಿ ಮಾಡಲು ಮುಂದಾಗಿದ್ದೇವೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಚಿರತಗುಂಡು ಸೂಲದಹಳ್ಳಿ ಮತ್ತು ಬಡೇಲಡುಕು ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರಾಗಿದ್ದು 7 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿರುವ ಬಗ್ಗೆ ವಿವರಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ, ಇಒ ನರಸಪ್ಪ, ತಹಶೀಲ್ದಾರ್ ನೇತ್ರಾವತಿ ಪಂಚಾಯತ್ ಇಂಜನೀಯರಿಂಗ್ ಇಲಾಖೆಯ ಎಇಇ ಮಲ್ಲಿಕಾರ್ಜುನ, ಸಿಡಿಪಿಒ ಮಾಲುಂಬಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.