ಫೆಬ್ರವರಿ ವೇಳೆ ಕೌನ್ಸಿಲ್‌ ಕಟ್ಟಡ ಸಿದ್ಧ?: ಪಾಲಿಕೆ ವಾರ್ಡ್‌ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಕಟ್ಟಡ ನವೀಕರಣ

| Published : Dec 12 2024, 01:48 AM IST / Updated: Dec 12 2024, 07:30 AM IST

BBMP
ಫೆಬ್ರವರಿ ವೇಳೆ ಕೌನ್ಸಿಲ್‌ ಕಟ್ಟಡ ಸಿದ್ಧ?: ಪಾಲಿಕೆ ವಾರ್ಡ್‌ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಕಟ್ಟಡ ನವೀಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ್ಯಂತರ ರು. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿರುವ ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣ ಕಾಮಗಾರಿ ಫೆಬ್ರವರಿ ವೇಳೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

  ಬೆಂಗಳೂರು : ಕೋಟ್ಯಂತರ ರು. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿರುವ ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣ ಕಾಮಗಾರಿ ಫೆಬ್ರವರಿ ವೇಳೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬಿಬಿಎಂಪಿ ವಾರ್ಡ್‌ ಸಂಖ್ಯೆ 198 ರಿಂದ 225ಕ್ಕೆ ಏರಿಕೆಯಾದ ಹಿನ್ನೆಲೆ ಪಾಲಿಕೆ ಸದಸ್ಯರ ಸಂಖ್ಯೆಯೂ ಹೆಚ್ಚಾಗಲಿರುವ ಹಿನ್ನೆಲೆ ಕೌನ್ಸಿಲ್ ಕಟ್ಟಡವನ್ನು ನವೀಕರಣ ಗೊಳಿಸಲಾಗುತ್ತಿದೆ. ಕೌನ್ಸಿಲ್ ಕಟ್ಟಡದ ಮರು ವಿನ್ಯಾಸದ ಜತೆಗೆ ಹೈಟೆಕ್ ತಂತ್ರಜ್ಞಾನ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

ಕಳೆದೆರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಮೈಕ್ ಅಳವಡಿಕೆ ಜತೆ ಸೌಂಡ್ ಪ್ರೂಫ್ ಸಭಾಂಗಣ ವ್ಯವಸ್ಥೆ, ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮೆರ ಅಳವಡಿಕೆ ಸೇರಿ ಮೊದಲಾದ ಕಾಮಗಾರಿಯಷ್ಟೇ ಬಾಕಿ ಇದ್ದು, ಫೆಬ್ರವರಿ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ₹10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ಆರಂಭಿಸಲಾಗಿತ್ತು. ಇದೀಗ ಹೆಚ್ಚುವರಿ ಮೂರು ಕೋಟಿ ರು. ಅಗತ್ಯವಿದೆ. ಈ ವೆಚ್ಚದಲ್ಲಿ ಮೈಕ್ ಅಳವಡಿಕೆ ಜತೆ ಸೌಂಡ್ ಪ್ರೂಫ್ ಸಭಾಂಗಣ ವ್ಯವಸ್ಥೆ, ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮೆರ ಅಳವಡಿಕೆ ಸೇರಿ ಮೊದಲಾದ ಕಾಮಗಾರಿ ನಡೆಸುತ್ತಿದೆ.

ಆಸನ ಸಂಖ್ಯೆ ಹೆಚ್ಚಳ: ಕೌನ್ಸಿಲ್ ಕಟ್ಟಡದಲ್ಲಿ ಇಲ್ಲಿಯವರೆಗೂ 270 ಮಂದಿ ಕೂರಲು ಅವಕಾಶವಿತ್ತು. ಪಾಲಿಕೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಶಾಸಕರು, ಸಂಸದರು ಪರಿಷತ್ ಸದಸ್ಯರಿಗೆ ಸೀಮಿತವಾಗಿದ್ದ 270 ಆಸನ ಸಂಖ್ಯೆಯನ್ನು ಈಗ 364 ಮಂದಿಗೆ ಏರಿಸಲಾಗುತ್ತಿದೆ. ಬಿಬಿಎಂಪಿ ಕೌನ್ಸಿಲ್ ಕಟ್ಟಡವು 330.15 ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಅದರಂತೆ 52.68 ಚದರಡಿ ವಿಸ್ತರಿಸುತ್ತಿದ್ದು ವಿಸ್ತರಣೆ ನಂತರ ಕೌನ್ಸಿಲ್ ಕಟ್ಟಡವು 382.83 ಚದರಡಿ ವಿಸ್ತೀರ್ಣವನ್ನು ಹೊಂದಲಿದೆ.

ಬಿಬಿಎಂಪಿ ಬಜೆಟ್‌ ವೇಳೆಗೆ ಉದ್ಘಾಟನೆ?:  ಕೌನ್ಸಿಲ್‌ ಕಟ್ಟಡ ಕಾಮಗಾರಿ ಹಿನ್ನೆಲೆಯಲ್ಲಿ 2023-24 ಹಾಗೂ 2024-25ನೇ ಸಾಲಿನ ಬಜೆಟ್‌ ಮಂಡನೆಯನ್ನು ಟೌನ್‌ ಹಾಲ್‌ ಸಭಾಂಗಣದಲ್ಲಿ ನಡೆಸಲಾಗಿತ್ತು. ಈ ಬಾರಿಯ 2025-26ನೇ ಸಾಲಿನ ಬಿಬಿಎಂಪಿಯ ಆಯವ್ಯಯ ಮಂಡನೆ ಅವಧಿಗೆ ಕೌನ್ಸಿಲ್‌ ಕಟ್ಟಡ ಉದ್ಘಾಟನೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.