ಸಾರಾಂಶ
ಮೈಕ್ರೋ ಅಬ್ಸರ್ವರ್ ರಾಗಿ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ನೇಮಕ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ಕಾರ್ಯ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫೆ. 28ರಂದು ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಕಾಲೇಜಿನ ನೂತನ ಕಟ್ಟಡದಲ್ಲಿ ಪರಿಷತ್ ಚುನಾವಣೆ ಮರು ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ ಎಂದರು.ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆಯೇ ಮರು ಮತ ಎಣಿಕೆ ನಡೆಯಲಿದೆ. 2021 ರಲ್ಲಿ ನಡೆದ ಚುನಾವಣೆ ಮತ ಯಂತ್ರಗಳನ್ನು ಬಾಕ್ಸ್ ನಲ್ಲಿ ಹಾಕಿ ಟ್ರೆಸರಿಯಲ್ಲಿ ಇರಿಸಲಾಗಿದೆ. ಫೆ. 28ರಂದು ಬೆಳಗ್ಗೆ 6.30ಕ್ಕೆ ಟ್ರಸರಿಯಿಂದ ಮತಯಂತ್ರ ಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಥವಾ ಏಜೆಂಟ್‌ರ ಸಮ್ಮುಖದಲ್ಲಿ ಮರುಮತ ಎಣಿಕೆ ಕೇಂದ್ರಕ್ಕೆ ಬಿಗಿ ಬಂದೋಬಸ್ ನಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.
ಮತ ಎಣಿಕೆಗೆ 3 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಟೇಬಲ್ ಗಳಲ್ಲಿ ಮತ ಎಣಿಕೆ ನಡೆದರೆ ಇನ್ನೊಂದು ಟೇಬಲ್ ರಿಟರ್ನಿಂಗ್ ಆಫೀಸರ್ ನಿರ್ವಹಿಸಲಿದ್ದಾರೆ. ಜಿಲ್ಲೆಯ ಇಬ್ಬರು ಎಸಿಗಳನ್ನು ಸೂಪರ್ ವೈಸರ್ ಗಳನ್ನಾಗಿ ಹಾಗೂ ಇಬ್ಬರು ತಹಸೀಲ್ದಾರ್ ಗಳನ್ನು ಅವರ ಸಹಾಯಕರನ್ನಾಗಿ ನೇಮಿಸಲಾಗಿದೆ ಎಂದರು.ಇನ್ನು ಮರುಮತ ಎಣಿಕೆಯನ್ನು ಸೂಕ್ಷ್ಮವಾಗಿ ನಿರ್ವಹಿಸುವ ಉದ್ದೇಶದಿಂದ ಚುನಾವಣಾ ಆಯೋಗ ಮೈಕ್ರೋ ಅಬ್ಸರ್ವರ್ ರನ್ನಾಗಿ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ನೇಮಿಸಿದೆ. ಉಜ್ವಲ್ ಕುಮಾರ್ ಘೋಷ್ ಬುಧವಾರವೇ ಚಿಕ್ಕಮಗಳೂರಿಗೆ ಆಗಮಿಸಿ ಎಲ್ಲಾ ಸಿದ್ಧತೆ ಗಮನಿಸುವ ಜೊತೆಗೆ ಅಗತ್ಯ ಮಾಹಿತಿ ಪಡೆದಿದ್ದಾರೆ ಎಂದು ವಿವರಿಸಿದರು.
ವಿಧಾನಪರಿಷತ್ ಚುನಾವಣೆ ಹಿನ್ನಲೆ: ಚಿಕ್ಕಮಗಳೂರು: ಜಿಲ್ಲೆಯಲ್ಲಿ ೨೦೨೧ ರಂದು ಡಿಸೆಂಬರ್ ೧೦ ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್‌ನ ಎ.ವಿ.ಗಾಯತ್ರಿಶಾಂತೇಗೌಡ, ಎಎಪಿಯ ಡಾ.ಸುಂದರಗೌಡ, ಪಕ್ಷೇತರರಾಗಿ ಬಿ.ಟಿ.ಚಂದ್ರಶೇಖರ್, ಜಿ.ಐ.ರೇಣುಕಾಕುಮಾರ್ ಕಣಕ್ಕಿಳಿದಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣಪಂಚಾಯಿತಿಯ ೧೨ ಮಂದಿ ನಾಮನಿರ್ದೇಶನ ಸದಸ್ಯರು ಮತದಾನ ಮಾಡಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದ ಗಾಯತ್ರಿಶಾಂತೇಗೌಡ ಮರುಮತ ಎಣಿಕೆಗೆ ಆಗ್ರಹಿಸಿದ್ದರು. ಆಗ ಜಿಲ್ಲಾಚುನಾವಣಾಧಿಕಾರಿ ಕೆ.ಎನ್.ರಮೇಶ್ ಚುನಾವಣಾ ಆಯೋಗದ ಸೂಚನೆ ಮೇರೆಗೆ ಫಲಿತಾಂಶ ಮರು ಮತ ಎಣಿಕೆ ನಡೆಸಿರಲಿಲ್ಲ. ಫಲಿತಾಂಶ ಪ್ರಕಟಿಸಿದ್ದರು.ಹಾಗಾಗಿ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಇತ್ತೀಚೆಗೆ ನಾಮಕರಣ ಸದಸ್ಯರ ೧೨ ಮತಗಳನ್ನು ಪ್ರತ್ಯೇಕವಾಗಿರಿಸಿ ೩೦ ದಿನದೊಳಗೆ ಮರುಎಣಿಕೆ ಮಾಡುವಂತೆ ಆದೇಶಿಸಿದೆ. ಮರುಮತ ಎಣಿಕೆಗೆ ತಡೆ ನೀಡುವಂತೆ ಎಂ.ಕೆ.ಪ್ರಾಣೇಶ್ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.-- ಬಾಕ್ಸ್ಸ್--
ಕ್ಯಾಮರಾ ಕಣ್ಗಾವಲು:ಪರಿಷತ್ ಚುನಾವಣೆ ಮರುಮತ ಎಣಿಕೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ 3 ಕ್ಯಾಮರಾ ಗಳನ್ನು ಅಳವಡಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಮೀನಾ ನಾಗರಾಜ್ ತಿಳಿಸಿದರು.
ಮರುಮತ ಎಣಿಕೆ ಕೊಠಡಿಯಲ್ಲಿ ಎರಡು ಸ್ಟ್ಯಾಂಡಿಂಗ್ ಕ್ಯಾಮರಾ ಹಾಗೂ ಒಂದು ಮೂವಿ ಕ್ಯಾಮೆರಾ ಮೂಲಕ ಇಡೀ ಮರು ಮತ ಎಣಿಕೆ ಪ್ರಕ್ರಿಯೆ ರೆಕಾರ್ಡ್ ಮಾಡಲಾಗುವುದು. ಬಳಿಕ ರೆಕಾರ್ಡಿಂಗ್ ಅನ್ನು ಸೀಲ್ಡ್ ಕವರಿನಲ್ಲಿ ಚುನಾವಣಾ ಆಯೋಗದ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುವುದು ಎಂದು ವಿವರಿಸಿದರು.ಗುರುವಾರ ಮತ ಎಣಿಕೆ ನಡೆದರೂ ಫಲಿತಾಂಶ ಪ್ರಕಟ ಮಾಡುವಂತಿಲ್ಲ. ಹೀಗಾಗಿ ಆದೇಶದಂತೆ ನ್ಯಾಯಾಲಯಗಳಿಗೆ ಮುಚ್ಚಿದ ಲಕೋಟೆಯಲ್ಲಿ ಸಂಪೂರ್ಣ ವಿವರ ಸಲ್ಲಿಸುವುದಾಗಿ ತಿಳಿಸಿದರು.
ಬಿಗಿ ಬಂದೋಬಸ್ತ್:ಮರುಮತ ಎಣಿಕೆ ಕಾರ್ಯ ಹಿನ್ನೆಲೆಯಲ್ಲಿ ಕಾಲೇಜು ಆವರಣದಲ್ಲಿ ಹಾಗೂ ನಗರಾಧ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಎಸ್ ಪಿ ಡಾ.ವಿಕ್ರಮ ಅಮಟೆ ತಿಳಿಸಿದರು.
ಐ ಡಿ ಎಸ್ ಜಿ ಕಾಲೇಜಿನ ಆವರಣದಲ್ಲಿ 4 ಕೆ ಎಸ್ ಆರ್ ಪಿ ತುಕಡಿಗಳು ಹಾಗೂ 300 ಪೋಲಿಸ್ ಸಿಬ್ಬಂದಿ ನಿಯೋಜಿಸ ಲಾಗುವುದು. ಇದಲ್ಲದೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಇದಲ್ಲದೆ ಕಾಲೇಜಿನ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮರುಮತ ಎಣಿಕೆಗೆ ನಿಯೋಜನೆಗೊಂಡ ಐಡಿ ಕಾರ್ಡ್ ಇದ್ದ ಸಿಬ್ಬಂದಿ, ಚುನಾವಣಾ ಅಭ್ಯರ್ಥಿ ಹಾಗೂ ಗುರುತಿನ ಪತ್ರ ಹೊಂದಿದ ಕೌಂಟಿಂಗ್ ಏಜೆಂಟ್ ಗಳನ್ನು ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಬಿಡಲಾಗುವುದು. ಉಳಿದಂತೆ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.