ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವರ್ಷಕ್ಕೊಮ್ಮೆ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಅಕ್ಟೋಬರ್ ೨೪ರಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಯವರ ಮತ್ತು ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಧ್ಯಾಹ್ನ ೧೨ ಗಂಟೆಗೆ ತೆರೆಯಲಾಗುವುದು ಎಂದು ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರು ತಿಳಿಸಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಸಕಲ ಸಿದ್ಧತೆಗೆ ಕ್ರಮಕೈಗೊಂಡಿದ್ದು, ಯಾತ್ರಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮವಹಿಸಿದ್ದಾರೆ ಎಂದು ತಿಳಿಸಿದರು. ಭಕ್ತಾದಿಗಳು ದೇವಿ ದರ್ಶನ ಮಾಡಲು ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ದೇವಿ ದರ್ಶನ ಪಡೆದ ನಂತರ ಭಕ್ತರಿಗೆ ಹಾಸನ ಜಿಲ್ಲೆಯ ಬಗ್ಗೆ ಗೌರವ ಹಾಗೂ ನೆಮ್ಮದಿ ಭಾವನೆ ಬರಬೇಕು ಎಂಬುದೇ ನಮ್ಮೆಲ್ಲರ ಇಚ್ಛೆ ಎಂದು ತಿಳಿಸಿದರು. ೨೦ ಲಕ್ಷ ಭಕ್ತರ ನಿರೀಕ್ಷೆ: ಅಕ್ಟೋಬರ್ ೨೪ರಂದು ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಾಗುವುದು. ನವಂಬರ್ ೩ರವರೆಗೂ ಜಾತ್ರಾ ಮಹೋತ್ಸವ ಜರುಗಲಿದೆ. ನ.೩ರ ಮಧ್ಯಾಹ್ನ ೧೨ ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗುವುದು. ಒಟ್ಟು ೧೧ ದಿನದಲ್ಲಿ ೯ ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಸುಮಾರು ೨೦ ಲಕ್ಷ ಭಕ್ತರ ಆಗಮನದ ನಿರೀಕ್ಷೆ ಹೊಂದಲಾಗಿದೆ ಎಂದು ಸಚಿವರು ಹೇಳಿದರು. ದಿನದ ೨೪ ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ನೆರಳು, ಜರ್ಮನ್ ಟೆಂಟ್, ಬ್ಯಾರಿಕೇಡಿಂಗ್, ಫ್ಯಾನ್ಸ್, ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ನಗರದ ಪ್ರಮುಖ ಬೀದಿಗಳಲ್ಲಿ ಮತ್ತು ನಗರದ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ಅಲಂಕಾರ ನಿರ್ವಹಣೆ ಮಾಡಲಾಗಿರುತ್ತದೆ. ದೇವಾಲಯದ ಆವರಣದಲ್ಲಿ ಆಕರ್ಷಕ ಹೂವಿನ ಅಲಂಕಾರವನ್ನು ನಿರ್ವಹಿಸಲು ಲಾಲ್‌ಬಾಗ್ ತಜ್ಞರ ಸಹಯೋಗ ಪಡೆಯಲಾಗಿದೆ. ಪ್ರತಿ ಎರಡು ದಿನಗಳಿಗೆ ಒಂದು ಬಾರಿ ಹೂವಿನ ಅಲಂಕಾರದ ಮಾದರಿಯನ್ನು ಬದಲಾವಣೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಸಿಲ್ವರ್ ಜುಬಿಲಿ ಪಾರ್ಕ್ ಆವರಣದಲ್ಲಿ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಇತರೆ ಮಾದರಿಗಳ ಆಕರ್ಷಕ ಫಲಪುಷ್ಪ ಪ್ರದರ್ಶನವನ್ನು ಅ. ೨೬ರಿಂದ ೨೯ರವರೆಗೆ ಒಟ್ಟು ೪ ದಿನಗಳು ಆಯೋಜಿಸಲಾಗಿದೆ. ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು, ತಲಾ ಒಬ್ಬರಿಗೆ ೧೦ ರು. ಮಕ್ಕಳಗೆ ೫ ರು. ಶುಲ್ಕ ನಿಗದಿಪಡಿಸಿದೆ. ಸಮವಸ್ತ್ರದೊಂದಿಗೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು. ಭಕ್ತರಿಗೆ ಉತ್ತಮ ಗುಣಮಟ್ಟದ ಲಡ್ಡು ಪ್ರಸಾದವನ್ನು ಇಸ್ಕಾನ್ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಹಾಸನದಲ್ಲಿಯೇ ತಯಾರಿಸಿ ವಿತರಿಸಲಾಗುವುದು. ದೇವಾಲಯದ ದುರಸ್ತಿ ಕಾರ್ಯಗಳಾದ ಶಾಶ್ವತ ಕಲ್ಲಿನ ನೆಲ ಹಾಸು ಮತ್ತು ಶೌಚಾಲಯ ದುರಸ್ತಿ, ಶಾಶ್ವತ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಹಾಸನಾಂಬ ದೇವಾಲಯದ ಆ್ಯಪ್ ರೂಪಿಸಿ ಲೋಕಾರ್ಪಣೆ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್, ಫೇಸ್‌ಬುಕ್ ಮೂಲಕವೂ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ದೇವಿ ದರ್ಶನದ ಕುರಿತು ಹಾಸನಾಂಬ ಆ್ಯಪ್ ಮೂಲಕ ಸಮಗ್ರ ಮಾಹಿತಿ ಪಡೆಯಲು ಕ್ರಮಕೈಗೊಳ್ಳಲಾಗಿದೆ.
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಅ. ೨೪ರಂದು ಸಂಜೆ ೬ ಗಂಟೆಗೆ ನಗರದ ಮಹಾರಾಜ ಪಾರ್ಕ್ ಮುಂಭಾಗದ ಹೇಮಾವತಿ ಪ್ರತಿಮೆ ಎದುರು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ದೇವಾಲಯದ ಸುತ್ತಮುತ್ತನಲ್ಲಿನ ನಿವಾಸಿಗಳಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಪಾಸ್ ನೀಡಲಾಗುವುದು. ಸ್ಕೌಟ್ ಅಂಡ್ ಗೈಡ್ಸ್ ಸೇವೆಯನ್ನು ಬಳಸಿಕೊಳ್ಳಲಾಗುವುದು ಮತ್ತು ಅವರುಗಳಿಗೆ ಉಳಿದುಕೊಳ್ಳಲು ಈಗಾಗಲೇ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.ಬಸ್ ಸೇವೆ: ಪ್ಯಾರಾಗ್ಲೈಡಿಂಗ್ ಮತ್ತು ಪ್ಯಾರಾಮೋಟರಿಂಗ್ ಹಾಟ್ ಏರ್ ಬಲೂನ್ ಬೂವನಹಳ್ಳಿ ಏರ್ ಪೋರ್ಟ್‌ನಲ್ಲಿ ನಡೆಸಲಾಗುವುದು. ನಗರದ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಡಬಲ್ ಡೆಕ್ಕರ್ ಬಸ್ ಸೇವೆ ಕಲ್ಪಿಸಲಾಗುವುದು.ಹಾಸನಾಂಬ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಉತ್ತಮ ಸಂವಹನಕ್ಕಾಗಿ ವಾಕಿ ಟಾಕಿ ಉಪಕರಣವನ್ನು ನೀಡಲಾಗಿದೆ. ಜೊನ್ನೆ ಪ್ರಸಾದ ಪೂರೈಕೆಗೆ ಇಸ್ಕಾನ್ ಸಹಯೋಗ ಪಡೆಯಲಾಗಿದೆ. ಲಡ್ಡು ತಯಾರಿಸಲು ಸ್ಥಳೀಯ ನಂದಿನಿ ತುಪ್ಪವನ್ನೇ ಬಳಸಲಾಗುವುದು. ೧೦೦೦ ರು. ಟಿಕೆಟ್ ನೇರ ದರ್ಶನಕ್ಕೆ ಅವಕಾಶವಿದ್ದು ೨ ಲಾಡು ಉಚಿತವಾಗಿ ನೀಡಲಾಗುವುದು. ೩೦೦ ರು. ಟಿಕೆಟ್ ವಿಶೇಷ ದರ್ಶನಕ್ಕೆ ಅವಕಾಶವಿದ್ದು ೧ ಲಡ್ಡು ಉಚಿತವಾಗಿ ನೀಡಲಾಗುವುದು. ೬೦ ರು. ಗೆ ೨ ಲಡ್ಡುಗಳುಳ್ಳ ಒಂದು ಪೊಟ್ಟಣದ ಪ್ರಸಾದವನ್ನು ಭಕ್ತರು ಖರೀದಿ ಮಾಡಬಹುದಾಗಿದೆ ಎಂದು ತಿಳಿಸಿದರು.ಜೊನ್ನೆ ಪ್ರಸಾದವನ್ನು ೨೪ ಗಂಟೆಗಳ ಕಾಲ ಉಚಿತವಾಗಿ ನೀಡಲಿದ್ದು, ಕಳೆದ ಬಾರಿ ದೇವಾಲಯದ ಹೊರಭಾಗದ ರಸ್ತೆಯಲ್ಲಿ ನೀಡಲಾಗುತ್ತಿತ್ತು. ಈ ಬಾರಿ ದೇವಾಲಯದ ಹೊರ ಆವರಣದಲ್ಲಿ ಪ್ರತ್ಯೇಕವಾದ ಸ್ಥಳ ಗುರುತಿಸಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ದೇವಸ್ಥಾನದ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಬಿಸಿಲಿನ ಅವಧಿಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಸ್ಥಳಗಳಲ್ಲಿ ೮೦ ಮೊಬೈಲ್ ಟಾಯ್ಲೆಟ್ ಅಳವಡಿಲಾಗಿದ್ದು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಹೊರ ಆವರಣದ ರಸ್ತೆಗಳಲ್ಲಿ ಪ್ರತಿ ನೂರು ಮೀಟರ್‌ಗೆ ಒಂದರಂತೆ ಮ್ಯಾನೇಜ್‌ಮೆಂಟ್ ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ೨೪x೭ ವಾರ್ ರೂಂ ತೆರೆಯಲಾಗಿದೆ. ಈ ಬಾರಿ ದೇವಾಲಯದ ಸುತ್ತಮುತ್ತ ಮತ್ತು ಒಳಭಾಗ ಯು.ಜಿ. ಕೇಬಲ್ ಅಳವಡಿಸಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಶಾಸಕರಾದ ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡ, ಜಿಲ್ಲಾಧಿಕಾರಿಗಳಾದ ಸಿ. ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.