ಫಲಿತಾಂಶಕ್ಕೆ ಕ್ಷಣಗಣನೆ: ಎಲ್ಲೆಲ್ಲೂ ಸೋಲು ಗೆಲವಿನದ್ದೇ ಚರ್ಚೆ

| Published : Jun 03 2024, 12:30 AM IST

ಸಾರಾಂಶ

ಬಾಳೆಹೊನ್ನೂರು, ಲೋಕಸಭಾ ಚುನಾವಣೆ ಮುಗಿದು 39 ದಿನಗಳ ಬಳಿಕ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಹೋಬಳಿ ವಿವಿಧೆಡೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ ಭರಾಟೆ ಹೆಚ್ಚಿದೆ.

ಕೆಲವೆಡೆ ಬೆಟ್ಟಿಂಗ್ ಭರಾಟೆ । ಎಲ್ಲಾ ಪಕ್ಷಗಳ ಕಾರ್ಯಕರ್ತರಿಂದ ವಿಜಯೋತ್ಸವಕ್ಕೆ ಸಿದ್ಧತೆಸಚಿನ್‌ಕುಮಾರ್ ಬಿ.ಎಸ್,

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಲೋಕಸಭಾ ಚುನಾವಣೆ ಮುಗಿದು 39 ದಿನಗಳ ಬಳಿಕ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಹೋಬಳಿ ವಿವಿಧೆಡೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ ಭರಾಟೆ ಹೆಚ್ಚಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಎಲ್ಲೆಡೆ ಜೂ.4ರ ಮಂಗಳ ವಾರದ ಫಲಿತಾಂಶ ಪ್ರಕಟಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಸೋಲು ಗೆಲವಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರಮುಖವಾಗಿ ಎನ್‌ಡಿಎ ಮೈತ್ರಿ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಫಲಿತಾಂಶಕ್ಕೆ ಕಾತರದಿಂದಿದ್ದು, ಇದೀಗ 3 ಪಕ್ಷಗಳ ಪ್ರಮುಖರು ಪಟ್ಟಣದ ಅಲ್ಲಲ್ಲಿ ಕಾರ್ಯ ಕರ್ತ ರೊಂದಿಗೆ ತಮ್ಮ ಅಭ್ಯರ್ಥಿ ಎಷ್ಟು ಮತ ಗಳಿಸುತ್ತಾರೆ, ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ, ಹಲವೆಡೆ ಸ್ಥಳೀಯ ಬೂತ್‌ ಗಳಲ್ಲಿ ನಮ್ಮ ಅಭ್ಯರ್ಥಿಗೆ ಎಷ್ಟು ಮತ ಬಂದಿದೆ ಎಂಬ ಕುರಿತು ಚರ್ಚಿಸುತ್ತಿದ್ದಾರೆ.ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಡುವೆ ನೇರ ಹಣಾಹಣಿಯಿದ್ದುದರಿಂದ ಇಬ್ಬರ ಬಗ್ಗೆಯೇ ಮತದಾರರು, ಪಕ್ಷಗಳ ಕಾರ್ಯಕರ್ತರು ಚರ್ಚಿಸುತ್ತಿದ್ದು, ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರೂ ಅವರ ಬಗ್ಗೆ ಮಾತನಾಡುತ್ತಿಲ್ಲ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದಾರೆ. ಶನಿವಾರ ಲೋಕಸಭೆ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಬಳಿಕ ಬಿಜೆಪಿ, ಜೆಡಿಎಸ್ ಮುಖಂಡರಂತೂ ಭಾರೀ ಸಂತಸದಲ್ಲಿದ್ದು ಕೆಲವು ಸಮೀಕ್ಷೆಗಳಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಗೆಲವು ಸಾಧಿಸುತ್ತಾರೆಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ನಾವುಗಳು ಏನಿದ್ದರೂ ಗೆಲುವಿನ ಅಂತರದ ಕಾತರದಲ್ಲಿದ್ದೇವೆ ಅಷ್ಟೇ. ಗೆಲವು ಈಗಾಗಲೇ ನಮ್ಮ ಪಾಲಿಗಿದ್ದು, ಫಲಿತಾಂಶದ ದಿನ ಹೇಗೆ ವಿಜಯೋತ್ಸವ ಆಚರಿಸಬೇಕು ಎಂಬ ಸಿದ್ಧತೆಯಲ್ಲಿದ್ದೇವೆ ಎನ್ನುತ್ತಿದ್ದಾರೆ ಬಿಜೆಪಿ, ಜೆಡಿಎಸ್ ಮುಖಂಡರು. ಕಾಂಗ್ರೆಸ್ ನಾಯಕರು ಸಹ ಹೆಚ್ಚಿನ ವಿಶ್ವಾಸದಲ್ಲಿದ್ದು, ಕ್ಷೇತ್ರದಲ್ಲಿ ಹಾಲಿ ಸಂಸದರ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವ ಕಾರಣ, ಗ್ಯಾರಂಟಿ ಯೋಜನೆಗಳಿಂದ ಈ ಬಾರಿ ಎಲ್ಲಾ ಸಮೀಕ್ಷೆ ತಲೆಕೆಳಗಾಗಿ ಇಲ್ಲಿ ಅಚ್ಚರಿ ಫಲಿತಾಂಶ ಬಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ 50 ಸಾವಿರ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮೂರು ಪಕ್ಷಗಳವರೂ ನಮ್ಮ ಅಭ್ಯರ್ಥಿಯೇ ಜಯಗಳಿಸುವರೆಂಬ ಭರವಸೆಯಲ್ಲಿದ್ದು ಅಲ್ಲಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ಬಾರದಂತೆ ಸಣ್ಣಪುಟ್ಟ ಬೆಟ್ಟಿಂಗ್ ಭರಾಟೆಯೂ ನಡೆದಿದೆ ಎಂಬ ಗುಸುಗುಸು ಹಲವೆಡೆ ಕೇಳಿಬಂದಿದೆ. ಒಟ್ಟಾರೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮತದಾರರು, ಪಕ್ಷಗಳ ಕಾರ್ಯಕರ್ತರು, ಮುಖಂಡರು ಸೋಲು ಗೆಲವಿನ ಬಿಸಿ ಬಿಸಿ ಚರ್ಚೆ ನಡೆಸುತ್ತ ಮತಯಂತ್ರದಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಭವಿಷ್ಯ ಎಷ್ಟು ಹೊತ್ತಿಗೆ ಹೊರಬೀಳಲಿದೆ ಎಂಬ ಕುತೂಹಲದಲ್ಲಿ ಮುಳುಗಿದ್ದಾರೆ.-- ಕೋಟ್ ೧---ಮೂರನೇ ಬಾರಿ ಮೋದಿ ನಾಯಕತ್ವಕ್ಕೆ ಗೆಲವು ದೊರೆಯಲಿದೆ ಎಂಬುದು ಶೇ.100ರಷ್ಟು ಖಚಿತವಾಗಿದ್ದು, ಜನ ಮೋದಿ, ಬಿಜೆಪಿ ಹಾಗೂ ದೇಶ ಪ್ರೇಮದ ಪರವಾಗಿ ಮತ ಚಲಾಯಿಸಿದ್ದಾರೆ. ವಿಜಯೋತ್ಸವವನ್ನು ಬಹುದೊಡ್ಡ ಪ್ರಮಾಣದಲ್ಲಿ ಸಂಭ್ರಮದಿಂದ ಆಚರಿಸಲಾಗುವುದು. ರಾಜ್ಯದಲ್ಲೂ ಹೆಚ್ಚಿನ ಸ್ಥಾನ ಎನ್‌ಡಿಎಗೆ ಎಂದು ಹೇಳಿರುವುದು ದೇಶಕ್ಕೆ ಇಂದು ನರೇಂದ್ರ ಮೋದಿಯೇ ಗ್ಯಾರಂಟಿ ಎಂಬುದು ಸಮೀಕ್ಷೆಗಳು ಖಚಿತಗೊಳಿಸಿವೆ.-ಪ್ರಭಾಕರ್ ಪ್ರಣಸ್ವಿ,

ಹೋಬಳಿ ಬಿಜೆಪಿ ಅಧ್ಯಕ್ಷ.-- ಕೋಟ್ ೨--ಕಳೆದ ತಿಂಗಳ ಚುನಾವಣೆಯವರೆಗೆ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಸಮಬಲದ ಹೋರಾಟ ಇತ್ತು. ಆದರೆ ನಂತರ ಮತದಾರರು ನಮ್ಮ ಪರ ಒಲವು ತೋರಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅಲೆಇದ್ದು, ಜಯ ಪ್ರಕಾಶ್ ಹೆಗ್ಡೆ ಗೆಲ್ಲುವುದು ಖಚಿತ. ಕಳೆದ ತಿಂಗಳವರೆಗೂ ಇಂಡಿಯಾ ಒಕ್ಕೂಟದ ಪರವಾಗಿಯೇ ಸಮೀಕ್ಷೆಗಳಿದ್ದವು. ಆದರೆ ಇದೀಗ ಸಮೀಕ್ಷೆಗಳು ಎನ್‌ಡಿಎ ಪರ ತೋರಿಸುತ್ತಿದೆ. ಚುನಾವಣೆ ಬಳಿಕ ಫಲಿತಾಂಶಕ್ಕೆ ಅಂತರ ಹೆಚ್ಚಿದ್ದರಿಂದ ಅಲ್ಲಿ ಏನಾದರೂ ಅವ್ಯವಹಾರ ನಡೆದಿರುವ ಶಂಕೆಯಿದೆ. -ಮಹಮ್ಮದ್ ಹನೀಫ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ.೦೨ಬಿಹೆಚ್‌ಆರ್ ೧: ಕೋಟಾ ಶ್ರೀನಿವಾಸಪೂಜಾರಿ೦೨ಬಿಹೆಚ್‌ಆರ್ ೨: ಜಯಪ್ರಕಾಶ್ ಹೆಗ್ಡೆ