ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಕ್ಷಣಗಣನೆ

| Published : Feb 01 2024, 02:07 AM IST

ಸಾರಾಂಶ

ಫೆ. 2ರಂದು ಸಂಜೆ 7.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ವಿಜಯನಗರ ಗತವೈಭವ ಮರುಕಳಿಸಲು ಹಂಪಿ ಸಜ್ಜುಗೊಳ್ಳುತ್ತಿದೆ. ನಾಲ್ಕು ವೇದಿಕೆಗಳಲ್ಲಿ ಕಲಾ ವೈಭವ ಸೃಷ್ಟಿಸಲು ವಿಜಯನಗರದ ನೆಲ ಸಿದ್ಧಗೊಳ್ಳುತ್ತಿದೆ.

ಫೆ. 2ರಂದು ಸಂಜೆ 7.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಬಳಿಕ ಹಂಪಿಯ ಗಾಯತ್ರಿ ಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ವೇದಿಕೆ ಮತ್ತು ಸಾಸಿವೆಕಾಳು ಗಣಪತಿ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೂರು ದಿನಗಳವರೆಗೆ ಹಂಪಿಯಲ್ಲಿ ಕಲಾ ಲೋಕವೇ ಸೃಷ್ಟಿಯಾಗಲಿದೆ.

ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಶ್ವಿನಿ ಪುನೀತ್‌ರಾಜಕುಮಾರ ಅವರು ಭಾಗವಹಿಸಲಿದ್ದಾರೆ. ಶಾಸಕ ಎಚ್.ಆರ್. ಗವಿಯಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಜಮೀರ್‌ ಅಹಮದ್ ಖಾನ್‌, ಶಿವರಾಜ್‌ ತಂಗಡಗಿ ಸೇರಿದಂತೆ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ.

ಕಲಾ ವೈಭವ: ಹಂಪಿ ಉತ್ಸವದಲ್ಲಿ ನಾಡಿನ ಕಲೆಯನ್ನು ಉಣಬಡಿಸಲು ಕಲಾವಿದರು ಸಜ್ಜಾಗಿದ್ದಾರೆ. ಐದು ಸಾವಿರ ಕಲಾವಿದರು ಹಂಪಿಯಲ್ಲಿ ವೈವಿಧ್ಯಮಯ ಕಲೆಯನ್ನು ಉಣಬಡಿಸಲಿದ್ದಾರೆ. ಉತ್ಸವದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಎರಡು ಸಾವಿರ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗುತ್ತಿದೆ. ಸಹೃದಯಿಗಳಿಗೆ ಕಲೆಯನ್ನು ಆಸ್ವಾದಿಸಲು ವಿಜಯನಗರ ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಹಾಗಾಗಿ ಹಂಪಿಯತ್ತ ಜನರ ಚಿತ್ತವೂ ನೆಟ್ಟಿದೆ.

ಉತ್ಸವದಲ್ಲಿ ಟಗರು, ಎತ್ತು, ಶ್ವಾನಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಆಗಸದಿಂದ ಹಂಪಿ ಸ್ಮಾರಕಗಳ ವೀಕ್ಷಣೆಗೆ ಹಂಪಿ ಬೈ ಸ್ಕೈ ಯೋಜನೆ ರೂಪಿಸಲಾಗಿದೆ. ಕುಸ್ತಿ ಪಂದ್ಯಾವಳಿ, ಎತ್ತಿನ ಬಂಡಿಗಳ ಗಾಲಿ ಜೋಡಣೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪುಸ್ತಕ ಮೇಳ, ವಸ್ತು ಪ್ರದರ್ಶನ, ಸಿರಿಧಾನ್ಯ ಮೇಳವೂ ನಡೆಯಲಿದೆ. ಕೃಷಿಕರನ್ನು ಆಕರ್ಷಿಸಲು ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಹಂಪಿ ಉತ್ಸವ ಬರೀ ಮನರಂಜನೆ ಅಲ್ಲ, ಸಂದೇಶವೂ ನೀಡಬೇಕೆಂಬ ಆಶಯದೊಂದಿಗೆ ಕೃಷಿ ಇಲಾಖೆ ಸಿರಿ ಧಾನ್ಯ ಮೇಳ ಆಯೋಜಿಸಿದೆ.

ನಟ ದರ್ಶನ್‌ ಆಗಮನ: ಉತ್ಸವದಲ್ಲಿ ಕಲಾವಿದೆ ಅನುರಾಧಾ ಭಟ್‌ ಅವರು ವಿರೂಪಾಕ್ಷೇಶ್ವರ ಗೀತೆ, ನೃತ್ಯ ಗಾಯನ ನಡೆಸಿಕೊಡಲಿದ್ದಾರೆ. ಬಳಿಕ ವಿಜಯ ಪ್ರಕಾಶ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಫೆ. 3ರಂದು ಗಾಯತ್ರಿ ಪೀಠ ವೇದಿಕೆಯಲ್ಲಿ 2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಪಾಲ್ಗೊಳ್ಳಲಿದ್ದಾರೆ. ವಿ. ಹರಿಕೃಷ್ಣ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಫೆ. 4ರಂದು ನಟರ ದಂಡೇ ಹಂಪಿ ಉತ್ಸವಕ್ಕೆ ಆಗಮಿಸಲಿದೆ. ರವಿಚಂದ್ರ ಅವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಟರಾದ ರವಿಶಂಕರ್ ಆರ್ಮುಗಂ, ಅಜಯರಾವ್‌, ನೆನಪಿರಲಿ ಪ್ರೇಮ, ದಿಗಂತ್‌, ಜಾಹಿದ್‌ ಅಹಮದ್ ಖಾನ್‌ ಅವರು ಕೂಡ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ನಟಿಯರಾದ ರಾಗಿಣಿ ದಿವೇದಿ, ನಮ್ರತಾ ಗೌಡ, ಸಂಯುಕ್ತಾ ಹೆಗ್ಡೆ ಸೇರಿದಂತೆ ಸ್ಯಾಂಡಲ್‌ವುಡ್‌ನ ನಟಿಯರು ಆಗಮಿಸಲಿದ್ದಾರೆ. ಸಾಧುಕೋಕಿಲ ಮತ್ತು ತಂಡ ಕೂಡ ರಸಮಂಜರಿ ಕಾರ್ಯಕ್ರಮ ನೀಡಲಿದೆ.

ಧ್ವನಿ ಮತ್ತು ಬೆಳಕು ಕಾರ್ಯಕ್ರಮ: ಹಂಪಿಯ ಗಜಶಾಲೆ ಆವರಣದಲ್ಲಿ 125ಕ್ಕೂ ಹೆಚ್ಚು ಕಲಾವಿದರು ವಿಜಯನಗರ ಗತ ಕಾಲದ ವೈಭವ ಮರುಕಳಿಸುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನೀಡಲಿದ್ದಾರೆ. ಹಂಪಿ ಉತ್ಸವ ಬರೀ ಉತ್ಸವವಲ್ಲ, ಇದೊಂದು ನಾಡಿನ ಕಲೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿ ಮಾರ್ಪಡಲಿರುವ ಹಿನ್ನೆಲೆಯಲ್ಲಿ ಕಲಾವಿದರು ಕೂಡ ಕಲೆಯನ್ನು ಪ್ರದರ್ಶಿಸಲು ತಾಲೀಮು ನಡೆಸುತ್ತಿದ್ದಾರೆ.

ಹಂಪಿ ನೆಲ ಕನ್ನಡ ನಾಡಿನ ಸಂಸ್ಕೃತಿ, ಕಲೆಯನ್ನು ಉಣಬಡಿಸಲು ಸಜ್ಜಾಗುತ್ತಿದೆ. ಹಾಗಾಗಿ ಹಂಪಿಯತ್ತ ಜನರು ಆಗಮಿಸಲುತ್ತಿದ್ದಾರೆ. ಹಂಪಿ ಉತ್ಸವ ಈಗ ಟ್ರೇಂಡಿಂಗ್‌ ಆಗುತ್ತಿದ್ದು, ಜಾಲತಾಣಗಳಲ್ಲೂ ಹಂಪಿ ಉತ್ಸವದ್ದೇ ಚರ್ಚೆ ನಡೆಯುತ್ತಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ: ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ. 2ರಂದು ಚಾಲನೆ ನೀಡಲಿದ್ದಾರೆ. ಮೂರು ದಿನಗಳವರೆಗೆ ಹಂಪಿ ಉತ್ಸವ ನಡೆಯಲಿದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜತೆಗೆ ಸ್ಯಾಂಡಲ್‌ವುಡ್‌ ನಟ, ನಟಿಯರು ಕೂಡ ಉತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್ ತಿಳಿಸಿದರು.