ಲೋಕ ಹಣೆಬರಹ ತಿಳಿಸಲು ವೇದಿಕೆ ಸಿದ್ಧ

| Published : Jun 03 2024, 01:15 AM IST / Updated: Jun 03 2024, 09:04 AM IST

ಸಾರಾಂಶ

ಮತ ಎಣಿಕೆ ಕಾರ್ಯ ಇಲ್ಲಿನ ಕೃಷಿ ವಿವಿಯಲ್ಲಿ ನಡೆಯಲಿದೆ. ಪ್ರತಿವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

 ಧಾರವಾಡ :  ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 112 ಟೇಬಲ್‌ಗಳಲ್ಲಿ ಅಂದಾಜು 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ. ಜೂ. 4ರಂದು ಮಧ್ಯಾಹ್ನದೊಳಗೆ ಫಲಿತಾಂಶ ಹೊರಬೀಳಲಿದೆ. ಎಲ್ಲರ ಚಿತ್ತ ಇದೀಗ ಫಲಿತಾಂಶದತ್ತ ನೆಟ್ಟಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಕಾರ್ಯ ಇಲ್ಲಿನ ಕೃಷಿ ವಿವಿಯಲ್ಲಿ ನಡೆಯಲಿದೆ. ಪ್ರತಿವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. 20 ಸುತ್ತುಗಳಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ ಎಂದರು.

ಮೊಬೈಲ್‌ ಅವಕಾಶವಿಲ್ಲ : ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಹಾಗೂ ಸ್ಮಾರ್ಟ್‌ವಾಚ್, ಎಲೆಕ್ಟ್ರಾನಿಕ್ ಡಿವೈಸಿಸ್ ತರಲು ಅವಕಾಶವಿಲ್ಲ. ಅಭ್ಯರ್ಥಿಗಳು, ಮತ ಎಣಿಕಾ ಏಜೆಂಟರು, ಚುನಾವಣಾ ಏಜೆಂಟರು ಹಾಗೂ ಇತರರು ತಮ್ಮ ಮೊಬೈಲ್‌ಗಳನ್ನು ಕೇಂದ್ರದ ಹೊರಗೆ ಬಿಟ್ಟು ಬರಬೇಕು. ಒಂದು ವೇಳೆ ಮರೆತು ತಂದರೂ, ಅವರಿಗೆ ಮೊದಲ ಗೇಟ್‌ನಲ್ಲಿ ಮೊಬೈಲ್ ಸಂಗ್ರಹ ಕೇಂದ್ರ ತೆರೆಯಲಾಗಿದ್ದು, ಅಲ್ಲಿಡಬೇಕು ಎಂದರು.

ಮತ ಎಣಿಕೆ ಕೇಂದ್ರದ ಸುತ್ತ 200ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೂ. 5ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಜೂ. 6ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದರು.

ಇಟಿಪಿಬಿಎಸ್ ಮತಪತ್ರ

ಇಟಿಪಿಬಿಎಸ್ (ಅಂಚೆ ಮತ) ಮತಪತ್ರಗಳ ಟ್ರಂಕನ್ನು ಜಿಲ್ಲಾ ಖಜಾನೆ ಧಾರವಾಡದ ಭದ್ರತಾ ಕೊಠಡಿಯಿಂದ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ಜಿಪಿಎಸ್ ಅಳವಡಿಸಿದ ವಾಹನದಲ್ಲಿ ಮತಎಣಿಕೆ ಕೇಂದ್ರಕ್ಕೆ ಸಾಗಿಸಲಾಗುವುದು ಎಂದರು.

ಇವಿಎಂ

ವಿದ್ಯುನ್ಮಾನ ಮತಯಂತ್ರ (ಇವಿಎಂ) ಭದ್ರತಾ ಕೊಠಡಿಯನ್ನು ಬೆಳಗ್ಗೆ 6.30ಕ್ಕೆ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರ ಉಪಸ್ಥಿತಿಯಲ್ಲಿ ತೆರೆಲಾಗುತ್ತದೆ. ಅಂಚೆ ಮತಪತ್ರ ಹಾಗೂ ಇವಿಎಂಗಳ ಮತ ಎಣಿಕೆಯ ಕಾರ್ಯ ಜೂ. 4ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ.

ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್ ಮತಎಣಿಕೆ ಕಾರ್ಯ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ನಡೆಯಲಿದೆ. ಮತಎಣಿಕೆ ಕಾರ್ಯಕ್ಕೆ ಹೆಚ್ಚುವರಿಯಾಗಿ 6 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, 6 ಟೇಬಲ್‌ಗಳಲ್ಲಿ ಅಂಚೆಮತ ಪತ್ರಗಳ ಮತ ಎಣಿಕೆ ಕಾರ್ಯ ಜರುಗಲಿದೆ ಎಂದು ಹೇಳಿದರು.

ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು, ಇತರ ಸೇರಿದಂತೆ ಒಟ್ಟು 1500 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 697 ಜನರು ರಾಜಕೀಯ ಪಕ್ಷ, ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಎಣಿಕಾ ಏಜೆಂಟರು ಆಗಮಿಸಲಿದ್ದಾರೆ ಎಂದರು.

ನಿಷೇಧಾಜ್ಞೆ

ಮತಎಣಿಕೆ ಕಾರ್ಯ ನಡೆಯುವುದರಿಂದ ಜೂ. 3ರ ಸಂಜೆ 6ರಿಂದ ಜೂ. 5ರ ರಾತ್ರಿ 10ರ ವರೆಗೆ ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಆದೇಶಿಸಲಾಗಿದೆ.

ಮಾಧ್ಯಮಗಳಿಗೆ ಪ್ರತ್ಯೇಕ ಕೇಂದ್ರ

ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳಿಗೆ ವಿಶೇಷವಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ. ಮತ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇವಿಎಂ ಮತ್ತು ಮತಪತ್ರಗಳನ್ನು ಮುದ್ರೆ (ಸೀಲ್) ಮಾಡುವ ಕಾರ್ಯ ಕೈಗೊಳ್ಳಲಾಗುವುದು.

ನಂತರ ಇವಿಎಂಗಳನ್ನು ಇಲ್ಲಿನ ಮಿನಿವಿಧಾನಸೌಧದ ಆವರಣದಲ್ಲಿರುವ ಇವಿಎಂ ವೇರ್‌ಹೌಸ್ ತೆರೆದು ವಿಧಾನಸಭಾ ಕ್ಷೇತ್ರವಾರು ಭದ್ರಪಡಿಸಲಾಗುವುದು. ಮುದ್ರೆ ಹಾಕಲಾದ ಮತಪತ್ರ ಧಾರವಾಡದ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ, ಉಪ ಪೊಲೀಸ್ ಆ‌ಯುಕ್ತ ಕುಶಲ್ ಚೌಕ್ಸೆ , ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು.

17 ಅಭ್ಯರ್ಥಿಗಳು;

ಈ ಸಲ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದರು. 2019ರಲ್ಲಿ 19 ಅಭ್ಯರ್ಥಿಗಳಿದ್ದರು.