ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾರತೀಯ ಸಂವಿಧಾನ ನಮಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದು, ಎಲ್ಲರೂ ತಪ್ಪದೇ ನಮ್ಮ ಹಕ್ಕನ್ನು ಚಲಾಯಿಸಬೇಕಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಕರೆ ನೀಡಿದರು.ಇಲ್ಲಿನ ಗೋಪಾಳದ ಶಾರದಾದೇವಿ ಅಂಧರ ವಿಕಾಸ ಶಾಲೆಯಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಇಲಾಖೆ, ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿ ಸರ್ಕಾರ ರಚಿಸಬೇಕು ಎಂಬ ಅಧಿಕಾರ ಪ್ರಜೆಗಳಿಗೆ ಇರುತ್ತದೆ. ದೇಶ ಕಾಯುವ ಕೆಲಸ ಸೈನಿಕ ಮಾಡುತ್ತಾನೆ. ಆದರೆ, ದೇಶ ಕಟ್ಟುವ ಕೆಲಸ ಮತದಾನದ ಮೂಲಕ ಆಗಬೇಕು. ಅದಕ್ಕಾಗಿ ಐದು ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಸದೃಢ ದೇಶ ಕಟ್ಟುವ ಕೆಲಸ ಮತ ಚಲಾಯಿಸುವ ಮೂಲಕ ಮಾಡಬೇಕು ಎಂದರು.
ಈ ಬಾರಿ ಚುನಾವಣೆಯಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರೀಕರಿಗೆ ಅನುಕೂಲ ಆಗುವಂತೆ ವ್ಹೀಲ್ ಚೇರ್, ರ್‍ಯಾಂಪ್ , ಬ್ರೈಲ್ ಲಿಪಿ ಬ್ಯಾಲೆಟ್ ಪೇಪರ್, ಬ್ಯಾಲೆಟ್ ಬಗ್ಗೆ ಮಾಹಿತಿ ನೀಡುವ ಧ್ವನಿವರ್ಧಕ, ಸನ್ನೆ ಭಾಷೆಯಲ್ಲಿ ಮಾತನಾಡುವವರು ಅಥಾವ ಸನ್ನೆ ಭಾಷೆಯ ವಿಡಿಯೊ ಮೂಲಕ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಸಹಾಯ ಮಾಡುತ್ತಾರೆ. ಹಾಗೂ ಈ ಬಾರಿ ಪ್ರತಿ ಮತಗಟ್ಟೆಯಲ್ಲಿ ವಿಶೇಷ ಚೇತನ ಮತ್ತು ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಒಬ್ಬ ವಿಶೇಷ ಚೇತನ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.ಸ್ವೀಪ್ ಐಕಾನ್ ದೀಕ್ಷಿತ್ ಮಾತನಾಡಿ, ನಗರ ಭಾಗದಲ್ಲಿ ಮತದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ ಆಗಬೇಕಿದ್ದು, ಪ್ರಜ್ಞಾವಂತ ಮತದಾರರೆಲ್ಲರೂ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಸ್ವೀಪ್ ಐಕಾನ್ ಜ್ಯೋತಿ ಮಾತನಾಡಿ, ಮತದಾರರು ಯಾವುದೇ ಆಸೆ, ಆಮಿಶಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಹಾಗೂ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದರು.ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಮತ ಚಲಾಯಿಸಲು ಮೊದಲ ಆದ್ಯತೆ ನೀಡಿ, ಚುನಾವಣಾ ಆಯೋಗ ವಿಶೇಷ ಚೇತನರಿಗೆ ಅನೇಕ ಸವಲತ್ತು ನೀಡಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಮತದಾನ ಮಾಡಬೇಕು. ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಶಶಿರೇಖಾ ಮಾತನಾಡಿ, ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿ ದೇಶದಲ್ಲಿ ಉತ್ತಮ ಸರ್ಕಾರ ನಿರ್ಮಿಸುವ ಕರ್ತವ್ಯ ನಮ್ಮದಾಗಿದ್ದು, ಮತದಾನದ ಮೂಲಕ ಈ ಕರ್ತವ್ಯ ನಿರ್ವಹಿಸಿಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ವಿಶೇಷಚೇತನ ಮತ್ತು ಹಿರಿಯ ನಾಗರಿಕರು ನೃತ್ಯ ಮತ್ತು ಸನ್ನೆ ಭಾಷೆ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಿದರು.
ಪ್ರತಿ ಮತಗಟ್ಟೆಯಲ್ಲಿ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಸಹಾಯ ಮಾಡಲು ನೇಮಿಸಲಾಗಿರುವ ವಿಶೇಷ ಚೇತನ ಮತ್ತು ಹಿರಿಯ ನಾಗರಿಕ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಗುರುತಿನ ಚೀಟಿ ನೀಡಲಾಯಿತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಪ್ಪ, ಕಾರ್ಯದರ್ಶಿ ಎ.ಕೆ. ಪರಮೇಶ್ವರಪ್ಪ ಸೇರಿ ಹಲವರಿದ್ದರು.