ಪರಿಸರ ಹಾನಿಯಿಂದ ದೇಶಕ್ಕೇ ಹೊಡೆತ: ಜಿ. ಲೋಹಿತ್

| Published : Jun 09 2024, 01:35 AM IST

ಸಾರಾಂಶ

ಪರಿಸರ ನಾಶ ಹೀಗೆಯೇ ಮುಂದುವರಿದರೆ ೧೯೫೦ರ ಹೊತ್ತಿಗೆ ಭೂಮಿಯ ಶೇ. ೭೫ರಷ್ಟು ಮರುಭೂಮಿಯಾಗಲಿದೆ.

ಕುಮಟಾ: ಪ್ರಕೃತಿಗೆ ಮನುಷ್ಯನ ಆಸೆಗಳನ್ನು ಪೂರೈಸುವ ಶಕ್ತಿ ಇದೆಯೇ ಹೊರತು ದುರಾಸೆಗಳನ್ನಲ್ಲ. ಮನುಷ್ಯ ಅತಿರೇಕದ ದುರಾಸೆಯಿಂದ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿ ಸ್ವತಃ ವಿನಾಶದೆಡೆಗೆ ಸಾಗಿದ್ದಾನೆ ಎಂದು ಎಸಿಎಫ್ ಜಿ. ಲೋಹಿತ್ ತಿಳಿಸಿದರು.

ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕ, ಭಾರತಿ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರ ನಾಶ ಹೀಗೆಯೇ ಮುಂದುವರಿದರೆ ೧೯೫೦ರ ಹೊತ್ತಿಗೆ ಭೂಮಿಯ ಶೇ. ೭೫ರಷ್ಟು ಮರುಭೂಮಿಯಾಗಲಿದೆ. ಅರಣ್ಯ ನಾಶದ ಪರಿಣಾಮವಾಗಿ ಮಳೆಯ ವಿಷಮತೆ, ಮಾಲಿನ್ಯದ ಹೆಚ್ಚಳ, ಕ್ಷಾಮ, ಕೃಷಿ ಕ್ಷೇತ್ರಕ್ಕೆ ಹಿನ್ನಡೆ ಇತ್ಯಾದಿ ಸಮಸ್ಯೆಗಳು ತಲೆದೋರುತ್ತಾ ದೇಶದ ಆರ್ಥಿಕತೆಗೆ ಭಾರಿ ಹೊಡೆತವನ್ನು ನೀಡುತ್ತದೆ. ಇನ್ನಾದರೂ ಜಾಗೃತರಾಗಿ ಪರಿಸರವನ್ನು ರಕ್ಷಿಸಲು ಕಂಕಣಬದ್ಧರಾಗಬೇಕು. ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ, ಮುಖ್ಯವಾಗಿ ಯುವಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಮುಖ್ಯ ಅತಿಥಿ ಆರ್‌ಎಫ್‌ಒ ಎಸ್.ಟಿ. ಪಟಗಾರ ಮಾತನಾಡಿ, ಇಂತಹ ಕಾರ್ಯಕ್ರಮಗಳು ನೆಪಮಾತ್ರಕ್ಕೆ ಎಂಬಂತಾಗದೇ ಅರ್ಥಪೂರ್ಣವಾಗಿ ಪ್ರಯೋಜನಕಾರಿಯಾಗುವಂತಾಗಬೇಕು. ಅಂದಾಗ ಮಾತ್ರ ಪರಿಸರ ಪೂರಕ ಚಟುವಟಿಕೆಗಳಿಗೆ ಸಾರ್ಥಕತೆ ದೊರೆಯುತ್ತದೆ ಎಂದರು.

ಅತಿಥಿ ಹಿರೇಗುತ್ತಿ ಆರ್‌ಎಫ್‌ಒ ಪ್ರವೀಣಕುಮಾರ, ಪ್ರಕೃತಿಯೇ ನಿಜವಾದ ದೇವರಾಗಿದ್ದು, ಇದನ್ನು ಪ್ರೀತಿ, ಗೌರವ, ಕಾಳಜಿಯಿಂದ ಕಂಡರೆ ಒಳ್ಳೆಯ ಫಲ ಖಂಡಿತ ದೊರೆಯುತ್ತದೆ. ಇಂತಹ ದಿನಾಚರಣೆಗಳು ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯವೂ ಪರಿಸರ ಕಾಳಜಿ ನಮ್ಮ ಧ್ಯೇಯ, ಗುರಿಯಾಗಬೇಕು. ಅರಣ್ಯ ಅತಿಕ್ರಮಣದಂತಹ ಸಮಸ್ಯೆ ತಡೆಗಟ್ಟಲು ಅರಣ್ಯ ಇಲಾಖೆಯ ಜತೆಗೆ ಯುವಜನತೆ ಕೈಜೋಡಿಸಬೇಕು ಎಂದರು.

ಪ್ರಾಚಾರ್ಯೆ ಡಾ. ರೇವತಿ ಆರ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಯುನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಶ್ರೀನಿವಾಸ್ ಹರಿಕಾಂತ, ಭಾರತೀ ಸಂಸ್ಥೆ ಅಧ್ಯಕ್ಷೆ ವಿನುತಾ ಎನ್.ವಿ., ವಿದ್ಯಾರ್ಥಿ ಯುನಿಯನ್ ಕಾರ್ಯದರ್ಶಿ ಅನಿರುದ್ಧ ಭಟ್ಕೆರೆ, ಕಾರ್ತಿಕ ಹೆಗಡೆ, ಸುಪ್ರಿಯಾ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಹಿತ ಕುಮಾರ ಸ್ವಾಗತಿಸಿ ಪರಿಚಯಿಸಿದರು. ಭೂಮಿಕಾ ಗೌಡ ನಿರೂಪಿಸಿದರು. ಕಾರ್ತಿಕ ಹೆಗಡೆ ವಂದಿಸಿದರು. ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನ ಆಚರಿಸಿದರು.