ಸಾರಾಂಶ
ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶ ಮಾಡುವ ಸಂಚು ನಡೆಯುತ್ತಿದೆ.
ಹುಬ್ಬಳ್ಳಿ:
ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ದೇಶ ಉಳಿದರೆ ಧರ್ಮ ಸಂಸ್ಕೃತಿ ಉಳಿದು ಬೆಳೆಯಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀ ಹೇಳಿದರು.ಅವರು ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ದುರ್ಗಾದೇವಿ ಮತ್ತು ಕರಿಯಮ್ಮದೇವಿ ನೂತನ ದೇವಸ್ಥಾನದ ಲೋಕಾರ್ಪಣೆ, ನೂತನ ಗೋಪುರ ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ, ನಂದೀಶ್ವರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶ ಮಾಡುವ ಸಂಚು ನಡೆಯುತ್ತಿದೆ. ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ ಎಂದರು.ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾ ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ ಮತ್ತು ಧ್ಯಾನ ಎಂಬ ದಶಸೂತ್ರಗಳು ಎಲ್ಲರ ಬಾಳಿಗೆ ದಾರಿದೀಪ. ವೀರಶೈವ ಧರ್ಮ ಕಾಯಕ ಮತ್ತು ದಾಸೋಹದ ಮೂಲಕ ಭಾವೈಕ್ಯತೆ ಸಾಮರಸ್ಯ ಬೆಳೆಸಲು ಪ್ರಯತ್ನಿಸಿದೆ ಎಂದು ಹೇಳಿದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕಲಾದಗಿಯ ಗಂಗಾಧರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಶಿವಾನಂದಸ್ವಾಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ದೇವನಗೌಡ ಪಾಟೀಲ, ಗಂಗನಗೌಡ ಪಾಟೀಲ, ಶಿವನಗೌಡ ಧರ್ಮಗೌಡ್ರ, ನಾಗರಾಜ ಅಂಗಡಿ, ಶ್ರೀಕಂಠಗೌಡ್ರು ಹಿರೇಗೌಡ್ರ, ಮುದಕಪ್ಪ ಹರಕುಣಿ, ಬಿ.ಸಿ. ಕರಿಯಣ್ಣನವರ ಸೇರಿದಂತೆ ಹಲವರಿದ್ದರು.ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ-ಸಂಭ್ರಮದಿಂದ ಜರುಗಿತು.