ಸಾರಾಂಶ
ವಿಜಯನಗರದ ಪಾಲಿಕೆ ಬಜಾರ್ ಬಳಿ ಬೀದಿ ಬದಿ ವ್ಯಾಪಾರಿಗಳ ತೆರವು ಮಾಡಲು ಬಿಬಿಎಂಪಿ ಮುಂದಾಗಿತ್ತು. ಆದರೆ ಹೈಕೋರ್ಟ್ ತಡೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಜಯನಗರದ ಮೆಟ್ರೋ ನಿಲ್ದಾಣ ಬಳಿಯ ನೆಲ ಮಹಡಿಯ ಪಾಲಿಕೆ ಬಜಾರ್‌ನ ಮುಂಭಾಗದ ಬೀದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಲು ಮುಂದಾದ ಘಟನೆ ನಡೆದಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತೆರವು ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಕೈಬಿಟ್ಟಿದ್ದಾರೆ.ಗುರುವಾರ ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್ಸ್, ಪೊಲೀಸರ ತಂಡ ಏಕಾಏಕಿ ತೆರಳಿ ಸರ್ವೀಸ್ ರಸ್ತೆಯಲ್ಲಿ ಅನಾದಿ ಕಾಲದಿಂದ ವ್ಯಾಪಾರ ನಡೆಸುತ್ತಿದ್ದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಕ್ಕೆ ಮುಂದಾದರು. ಈ ಸ್ಥಳದಲ್ಲಿರುವ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸದಂತೆ ಈ ಹಿಂದೆಯೇ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೂ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸುವುದಕ್ಕೆ ಮುಂದಾದರು. ಗುರುವಾರ ಮಧ್ಯಾಹ್ನವೇ ವಿಚಾರಣೆ ನಡೆಸಿದ ನ್ಯಾಯಾಲಯವು ತೆರವುಗೊಳಿಸದಂತೆ ಬಿಬಿಎಂಪಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ತೆರವು ಕಾರ್ಯ ಕೈಬಿಟ್ಟಿದ್ದಾರೆ.
150ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಹಲವು ವರ್ಷದಿಂದ ವ್ಯಾಪಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ಬಿಬಿಎಂಪಿಯಿಂದ ನಿರ್ಮಿಸಿ ಉದ್ಘಾಟಿಸಲಾದ ನೆಲ ಮಹಡಿಯ ಪಾಲಿಕೆ ಬಜಾರ್‌ನಲ್ಲಿ 79 ಮಳಿಗೆ ಇವೆ. ಈ ಪೈಕಿ ಕೆಲವು ವ್ಯಾಪಾರಿಗಳಿಗೆ ಪಾಲಿಕೆ ಬಜಾರ್‌ನಲ್ಲಿ ಅನಧಿಕೃತವಾಗಿ ಮಳಿಗೆ ನೀಡಿ ಉಳಿದ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಆರೋಪಿಸಿದರು.ಇನ್ನು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಕ್ಕೆ ಬಿಬಿಎಂಪಿಯಿಂದ ಯಾವುದೇ ನೋಟಿಸ್ ನೀಡಿಲ್ಲ. ಏಕಾಏಕಿ ತೆರವುಗೊಳಿಸಲಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.